ADVERTISEMENT

ಬಾಂಬ್‌ ಇಟ್ಟವರು ದೇಶದ್ರೋಹಿಗಳು: ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 9:56 IST
Last Updated 3 ಮಾರ್ಚ್ 2024, 9:56 IST
ಯು.ಟಿ.ಖಾದರ್‌
ಯು.ಟಿ.ಖಾದರ್‌   

ಬೆಳಗಾವಿ: ‘ಬೆಂಗಳೂರಿನಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು. ಇಂಥ ಕೃತ್ಯ ಮಾಡಿದವರು ಮತ್ತು ಈ ಘಟನೆ ಹಿಂದೆ ಸಂಚು ರೂಪಿಸಿದವರನ್ನು ಮಟ್ಟ ಹಾಕಬೇಕು’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ, ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ನಿರ್ಭಯ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಬಹುದು. ಜನರು ನೆಮ್ಮದಿಯಿಂದ ಬದುಕು ಸಾಗಿಸಬಹುದು. ಶಾಂತಿಯುತವಾದ ರಾಜ್ಯ ಕೆಡಿಸಲು ಯತ್ನಿಸಿದವರನ್ನು ಮಟ್ಟಹಾಕಲು ಸರ್ಕಾರ ಕ್ರಮ ವಹಿಸಿದೆ. ಈ ಘಟನೆ ಹಿಂದೆ ಯಾರ ಕೈವಾಡವಿದೆ? ಅವರ ಉದ್ದೇಶವೇನು ಎಂಬುದು ತಿಳಿಯಬೇಕಿದೆ. ಮುಂದೆ ಇಂಥ ಕೃತ್ಯ ಮಾಡಲು ಬೇರೆಯವರೂ ಭಯಪಡುವಂತೆ, ಆರೋಪಿಗೆ ಶಿಕ್ಷೆ ವಿಧಿಸಬೇಕಿದೆ. ಮನುಷ್ಯತ್ವ ಹಾಗೂ ಕರುಣೆ ಇಲ್ಲದವರನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಂಥ ಘಟನೆ ನಡೆಯುತ್ತವೆಯೇ?’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಖಾದರ್‌, ‘ಈ ವೇಳೆ ಯಾರೂ ರಾಜಕಾರಣ ಮಾಡಬಾರದು. ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು. ನಮ್ಮಲ್ಲೇ ಭಿನ್ನಾಭಿಪ್ರಾಯ ಮೂಡಿದರೆ, ದುಷ್ಕರ್ಮಿಗಳು ಅದರ ಲಾಭ ಪಡೆಯುತ್ತಾರೆ. ಕರ್ನಾಟಕದಲ್ಲಿ ಎಲ್ಲರೂ ಸಹೋದರರಂತೆ ಒಂದಾಗಿ ಬಾಳ್ವೆ ನಡೆಸುತ್ತಿದ್ದೇವೆ. ನಮ್ಮನ್ನು ಬೇರ್ಪಡಿಸಲು ಯಾರಿಗೂ ಅವಕಾಶ ಕೊಡಬಾರದು’ ಎಂದು ಹೇಳಿದರು.

‘ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶಾಸಕರ ಭವನ ನಿರ್ಮಾಣ ಸಂಬಂಧ ಕೆಲವು ಯೋಜನೆ ಸಿದ್ಧಪಡಿಸಿದ್ದೇವೆ. ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆಯೂ ಆಗಿದೆ. ವಿಧಾನ ಪರಿಷತ್ ಸಭಾಪತಿ ಮತ್ತು ನಾನು ಸೇರಿಕೊಂಡು, ಶಾಸಕರ ಭವನಕ್ಕೆ ಅಂತಿಮ ರೂಪುರೇಷೆ ತಯಾರಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.