ADVERTISEMENT

ಖಾನಾಪುರ ‌| ಬತ್ತಿದ ಕೆರೆಗೆ ಹರಿದುಬಂದ ಮಲಪ್ರಭೆ

ಪ್ರಸನ್ನ ಕುಲಕರ್ಣಿ
Published 19 ನವೆಂಬರ್ 2023, 4:40 IST
Last Updated 19 ನವೆಂಬರ್ 2023, 4:40 IST
ಖಾನಾಪುರ ತಾಲ್ಲೂಕಿನ ಇಟಗಿ ಗ್ರಾಮದ ಕೆರೆ ಭರ್ತಿಯಾಗಿದೆ
ಖಾನಾಪುರ ತಾಲ್ಲೂಕಿನ ಇಟಗಿ ಗ್ರಾಮದ ಕೆರೆ ಭರ್ತಿಯಾಗಿದೆ   

ಖಾನಾಪುರ: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಬೆಳೆಗಳು ನೀರಿನ ಕೊರತೆಯಿಂದ ಬಳಲಿವೆ. ಜಲಮೂಲಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ.

ಈ ಸಂಕಷ್ಟದಿಂದ ಪಾರಾಗಲು ಇಟಗಿ ಗ್ರಾಮದ ನಾಗರಿಕರು ಕೆರೆ ತುಂಬಿಸುವ ಉಪಾಯ ಮಾಡಿ, ಯಶಸ್ಸನ್ನೂ ಕಂಡಿದ್ದಾರೆ.

ಇಟಗಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಕೆರೆಗಳಿಗೆ ಮಲಪ್ರಭಾ ನದಿಯಿಂದ ನೀರು ಹರಿಸುವ ಕಾರ್ಯ ಭರದಿಂದ ಸಾಗಿದೆ. ಮುಂದಿನ ಬೇಸಿಗೆಯಲ್ಲಿ ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜನ ಈ ಉಪಾಯ ಮಾಡಿದ್ದಾರೆ.

ADVERTISEMENT

ಇಟಗಿಯಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಎರಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಒಂದು ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜು, ಸಮುದಾಯ ಆರೋಗ್ಯ ಕೇಂದ್ರ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ, ಗ್ರಾಮ ಪಂಚಾಯ್ತಿ, ರಾಷ್ಟ್ರೀಕೃತ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ಹತ್ತಾರು ಸಹಕಾರಿ ವಾಣಿಜ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಇಟಗಿಯಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತದೆ. ಅಕ್ಕಪಕ್ಕದ ಮಾರ್ಗನಕೊಪ್ಪ, ಕ್ಯಾರಕೊಪ್ಪ, ಕರವಿನಕೊಪ್ಪ, ಗಂದಿಗವಾಡ, ಬೋಗೂರು, ತೋಲಗಿ, ಬೇಡರಹಟ್ಟಿ, ಚಿಕ್ಕಮುನವಳ್ಳಿ ಗ್ರಾಮಗಳ ಜನರಿಗೆ ಇಟಗಿ ಪ್ರಮುಖ ವ್ಯಾಪಾರಿ ಕೇಂದ್ರ. ಹೀಗಾಗಿ, ಇಲ್ಲಿ ನೀರಿನ ಬಳಕೆಯೂ ಹೆಚ್ಚು.

ಫಲವತ್ತಾದ ಜಮೀನು

ಈ ಊರಿನ ಜನರು ಕೃಷಿ ಮತ್ತು ಹೈನುಗಾರಿಕೆ ಅವಲಂಬಿಸಿದ್ದಾರೆ. ಇಟಗಿ ಗ್ರಾಮದ ಗ್ರಾಮ ಪಂಚಾಯ್ತಿ ಎದುರಿಗೆ 200 ಎಕರೆ ವಿಶಾಲವಾದ ಪ್ರದೇಶದಲ್ಲಿ ದೊಡ್ಡ ಕೆರೆ ಇದೆ. ಊರಿನ ಅಕ್ಕಪಕ್ಕದಲ್ಲಿ ಮೂರ್ನಾಲ್ಕು ಸಣ್ಣಪುಟ್ಟ ಕೆರೆಗಳಿವೆ. ಈ ಕೆರೆಗಳು ಭರ್ತಿಯಾದರೆ ಗ್ರಾಮದ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಸಲಿದೆ. ಇದಕ್ಕಾಗಿ 3 ಕಿ.ಮೀ ದೂರದಲ್ಲಿ ಹರಿಯುವ ಮಲಪ್ರಭಾ ನದಿಯಿಂದ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಪ್ಪ ಮುದುಕಪ್ಪ ತುರಮರಿ, ಉಪಾಧ್ಯಕ್ಷೆ ರಾಜಶ್ರೀ ಹುಣಶಿಕಟ್ಟಿ, ಸದಸ್ಯರಾದ ಸಂತೋಷ ಕಿಳೋಜಿ, ಚಂದ್ರಗೌಡ ಪಾಟೀಲ, ಮಾರುತಿ ಇಟಗಿ, ಯಲ್ಲಪ್ಪ ಗೋಕಾವಿ, ವಿಠ್ಠಲ ಕೀಳೋಜಿ, ಬಾಳಪ್ಪ ಬೆಣಚಿನಮರಡಿ, ರಾಯಪ್ಪ ಬಳಗಪ್ಪನವರ ಅವರೆಲ್ಲರ ಒಗ್ಗಟ್ಟು ಇದಕ್ಕೆ ಕಾರಣ.

ಖಾನಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹26.93 ಕೋಟಿ ಅನುದಾನವನ್ನು ಜಲ ಸಂ‍ಪನ್ಮೂಲಕ್ಕೆ ಬಳಸಲಾಗಿದೆ. ದೊಡ್ಡ ಕೆರೆಗೆ ಮಲಪ್ರಭಾ ನದಿಯಿಂದ ನೀರು ತುಂಬಿಸಲು ₹8.14 ಕೋಟಿ ವ್ಯಯಿಸಲಾಗಿದೆ
ಡಾ.ಅಂಜಲಿ ನಿಂಬಾಳಕರ, ಮಾಜಿ ಶಾಸಕಿ
ಇಟಗಿ ಕೆರೆಗೆ ನೀರು ಹರಿದರೆ ಇಡೀ ಗ್ರಾಮ ಮುಂದಿನ ಮಳೆಗಾಲದವರೆಗೆ ನಿಶ್ಚಿಂತೆಯಿಂದ ಇರಲಿದೆ ಎಂಬ ಉದ್ದೇಶದಿಂದ ಕೆರೆಗಳನ್ನು ತುಂಬಿಸುವ ಕಾಮಗಾರಿ ಕೈಗೊಳ್ಳಲಾಗಿದೆ.
ವೀರೇಶ ಸಜ್ಜನ, ಪಿಡಿಒ, ಇಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.