ರಾಮದುರ್ಗ: ತಾಲ್ಲೂಕಿನ 30 ಸಾವಿರ ಹೆಕ್ಟೇರ್ ಪ್ರದೇಶದ ನೀರಾವರಿಗಾಗಿ ರೂಪಿಸಿದ್ದ, ಉತ್ತರ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿರುವ ವೀರಭದ್ರೇಶ್ವರ ಹಾಗೂ ಸಾಲಾಪುರ ಏತ ನೀರಾವರಿ ಯೋಜನೆಗಳಿಗೆ ತುಕ್ಕು ಹಿಡಿದಿದೆ.
ಇದರಿಂದ, ಕುಡಿಯುವ ನೀರು, ನೀರಾವರಿ ಸೇರಿದಂತೆ ಜೀವಜಲಕ್ಕಾಗಿ ಕಾದು ಕುಳಿತ ಲಕ್ಷಾಂತರ ಜೀವಗಳಿಗೆ ಬೇಸರ ಮೂಡಿದೆ. ಒಣಭೂಮಿಯಾಗಿರುವ ತಾಲ್ಲೂಕಿನಲ್ಲಿ ಹಸಿರು ಮೂಡಲಿದೆ ಎಂದು ಕಾಯುತ್ತಿದ್ದ ಕಣ್ಣುಗಳಲ್ಲಿ ಭರವಸೆಯೇ ಇಲ್ಲವಾಗಿದೆ.
ಎರಡೂ ಯೋಜನೆಗಳು ಪ್ರಾರಂಭಗೊಂಡು ಸುಮಾರು ಒಂದೂವರೆ ದಶಕವೇ ಸಮೀಪಿಸುತ್ತಿದೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಂದು ಮುಖ್ಯಮಂತ್ರಿ ಆಗಿದ್ದರು. ₹544 ಕೋಟಿ ವೆಚ್ಚದಲ್ಲಿ ನಿರ್ಮಿಸಬೇಕಿದ್ದ ವೀರಭದ್ರೇಶ್ವರ ಏತ ನೀರಾವರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಇದಾದ ನಂತರ ಸಾಲಾಪೂರ ಜಮೀನುಗಳಿಗೂ ನೀರು ಒದಗಿಸುವ ಬಸವೇಶ್ವರ ಏತ ನೀರಾವರಿ ಯೋಜನೆಗೆ ₹536 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಭೂಮಿಪೂಜೆ ನೆರವೇರಿತು. ಆದರೂ, ಎರಡು ಯೋಜನೆಗಳು ಇನ್ನೂ ಪೂರ್ಣಗೊಳ್ಳದೇ ರೈತರ ಕನಸು ಇನ್ನೂ ಕನಸಾಗಿಯೇ ಉಳಿದಿದೆ.
ಕಳೆದ 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದಿದ್ದ ಅಶೋಕ ಪಟ್ಟಣ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2014–15 ರಾಜ್ಯ ಬಜೆಟ್‌ನಲ್ಲಿ ಎರಡೂ ಯೋಜನೆಗಳನ್ನು ಘೋಷಣೆ ಮಾಡಿಸುವಲ್ಲಿ ಸಫಲರಾಗಿದ್ದರು. ರಾಜ್ಯ ಸರ್ಕಾರದಿಂದ ಅನುಮೋದನೆಯೂ ಸಿಕ್ಕಿತ್ತು. ನಂತರದಲ್ಲಿ ಅಧಿಕಾರಕ್ಕೆ ಬಂದ ಶಾಸಕರು ಈ ವಿಚಾರದಲ್ಲಿ ಶ್ರಮ ವಹಿಸಲಿಲ್ಲ. ಈಗ ಮತ್ತೆ ಅಶೋಕ ಪಟ್ಟಣ ಶಾಸಕರಾಗಿದ್ದಾರೆ. ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ಇಂಥ ಯೋಜನೆಗಳು ಮರೆತು ಹೋಗಿವೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.
ಭೂಸ್ವಾಧೀನ ವಿಳಂಬ: ಈ ಎರಡೂ ಯೋಜನೆಗಳಿಗೆ ಯಾವುದೇ ಅಡೆತಡೆ ಮಾಡದೇ ಕಾಲುವೆ ಮತ್ತು ಪೈಪ್‌ಲೈನ್ ಅಳವಡಿಸಲು ಸುಮಾರು 2,400 ಎಕರೆ ಜಮೀನಿನನ್ನು ನೀಡಲು ರೈತರು ಒಪ್ಪಿಗೆ ಸೂಚಿಸಿದ್ದರು. ಯೋಜನೆ ಆರಂಭಗೊಂಡು ಒಂದೂವರೆ ದಶಕ ಗತಿಸಿದರೂ ಭೂಸ್ವಾಧೀನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, 220 ಎಕರೆ ಪ್ರದೇಶ ಮಾತ್ರ ಸ್ವಾಧೀನಕ್ಕೊಳಪಟ್ಟಿದೆ.
ಅಧಿಕಾರಿಗಳು ಮತ್ತು ರಾಜಕಾರಣಿಗಳ ನಿರಾಸಕ್ತಿಯಿಂದ ಯೋಜನೆಗಳು ಕನಸಾಗಿಯೇ ಉಳಿದಿವೆ. ಭೂಸ್ವಾಧೀನಕ್ಕೆ ಅಧಿಕಾರಿಗಳು ಗೊತ್ತು ಪಡಿಸಿರುವ ಜಮೀನಿನಲ್ಲಿ ರೈತರು ಯಾವುದೇ ಬೆಳೆ ಬೆಳೆದಿಲ್ಲ. ವಿಳಂಬ ನೀತಿಗೆ ಬೇಸತ್ತು ಕೆಲವು ರೈತರು ಅಗೆದಿರುವ ಚಿಕ್ಕ ಕಾಲುವೆಗಳನ್ನು ಮುಚ್ಚಲೂ ಮುಂದಾಗಿದ್ದಾರೆ.
ಆರಂಭದಲ್ಲೇ ಭೂಸ್ವಾಧೀನ ಪ್ರಕ್ರಿಯೆ ಜರುಗಿದ್ದರೆ ಪ್ರತಿ ಎಕರೆ ಜಮೀನಿಗೆ ₹5 ಲಕ್ಷದಿಂದ ₹6 ಲಕ್ಷ ನೀಡಬೇಕಿತ್ತು. ಆದರೆ, ಈಗ ಭೂಮಿ ಬೆಲೆ ಗಗನಕ್ಕೇರಿದೆ. ಇಂತಹ ಮಹತ್ವದ ಯೋಜನೆಗೆ ತಾಲ್ಲೂಕಿನ ಉತ್ತರ ಭಾಗದ ರೈತರು ಸ್ವಇಚ್ಛೆಯಿಂದ ಭೂಮಿ ಬಿಟ್ಟುಕೊಟ್ಟಿದ್ದರೂ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ರೈತಪರ ಕಾಳಜಿ ಎಷ್ಟಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ರೈತರು ಹೇಳುತ್ತಾರೆ.
ಕಂದಾಯ ಇಲಾಖೆ, ಭೂಸ್ವಾಧೀನ ಅಧಿಕಾರಿಗಳು ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲಾದರೂ ಭೂಸ್ವಾಧೀನ ಕೆಲಸವನ್ನು ತ್ವರಿತವಾಗಿ ಮಾಡಬೇಕು ಎನ್ನುವುದು ಈ ಭಾಗದ ರೈತರ ಬೇಡಿಕೆ.
30377 ಹೆಕ್ಟೇರ್ ನೀರಾವರಿ
ವೀರಭದ್ರ ಯೋಜನೆಯಿಂದ ರಾಮದುರ್ಗ ತಾಲ್ಲೂಕಿನ 28 ಗ್ರಾಮಗಳು ಮತ್ತು ಮುಧೋಳ ತಾಲ್ಲೂಕಿನ 4 ಗ್ರಾಮಗಳ ಒಟ್ಟು 17377 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಅದೇ ರೀತಿ ಸಾಲಾಪೂರ ಏತ ನೀರಾವರಿ ಯೋಜನೆಯಿಂದ 13000 ಹೆಕ್ಟೇರ್ ಪ್ರದೇಶ ನೀರಾವರಿಗಾಗಿ ಕಾತರದಿಂದ ಕಾಯುತ್ತಿದೆ. ಎರಡೂ ಯೋಜನೆ ಸೇರಿ ಬರೋಬ್ಬರಿ 30377 ಹೆಕ್ಟೇರ್ ಪ್ರದೇಶ ನೀರಾವರಿ ಆಗಬೇಕಿದೆ.
ರಾಮದುರ್ಗ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕಡಿಮೆ ಇರುವ ಪ್ರದೇಶಗಳಿಗೆ ನೀರು ಪೂರೈಸುವುದೇ ಈ ಎರಡೂ ಯೋಜನೆಗಳ ಉದ್ದೇಶವಾಗಿದೆ. ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಕರ್ತವ್ಯಲೋಪದಿಂದ ಬಹುನಿರೀಕ್ಷಿತ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಹೋರಾಟವೇ ನಮ್ಮ ಮುಂದಿನ ಮಾರ್ಗ.ಜಗದೀಶ ದೇವರಡ್ಡಿ, ಅಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕ
ಇವರೇನಂತಾರೆ..? ನಿರೀಕ್ಷೆಯಲ್ಲಿದ್ದೇವೆ ನೀರು ಬರುವುದೆಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದೇ. ನೀರಾವರಿ ಅನುಷ್ಠಾನವಾದರೆ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಲಿದೆ. ಇಂದುಮತಿ ಬುಡ್ಡಾಗೋಳ ರೈತ ಮಹಿಳೆ ಆರಂಭ ಶೂರತ್ವ ತೋರಿದ ಶಾಸಕ’ ಏತ ನೀರಾವರಿ ಯೋಜನೆಗೆ ಮುಂಚೆ ಇದ್ದ ಇಚ್ಛಾಶಕ್ತಿ ಮೂರನೇ ಬಾರಿಗೆ ಚುನಾಯಿತ ಶಾಸಕ ಅಶೋಕ ಪಟ್ಟಣ ಅವರಿಗೆ ಈಗ ಇಲ್ಲ. ಅವರು ಕೇವಲ ಆರಂಭ ಶೂರತ್ವ ತೋರಿದರೇ ವಿನಃ ರೈತರ ಬಗ್ಗೆ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಏತ ನೀರಾವರಿಗಳು ಇನ್ನೂ ನನೆಗುದಿಗೆ ಬಿದ್ದಿವೆ.ಮಲ್ಲಣ್ಣ ಯಾದವಾಡ, ಅಧ್ಯಕ್ಷ, ಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆ
ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಕಾಮಗಾರಿಯೂ ಶೀಘ್ರ ಪೂರ್ಣಗೊಳ್ಳಲಿದೆ.ಎಸ್.ಎಂ. ಬಾಲದಾರ, ಕಾರ್ಯನಿರ್ವಾಹಕ ಎಂಜಿನಿಯರ್, ಎಂಎಲ್‌ಬಿಸಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.