ADVERTISEMENT

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ | ಸಿಗದ ಅನುದಾನ: ಸಂಶೋಧನೆಗೆ ಬಡಿದ ಗರ

ಸಂತೋಷ ಈ.ಚಿನಗುಡಿ
Published 24 ಜನವರಿ 2025, 20:42 IST
Last Updated 24 ಜನವರಿ 2025, 20:42 IST
<div class="paragraphs"><p>ಬೆಳಗಾವಿಯ ವಿಟಿಯು ಕ್ಯಾಂಪಸ್‌ ‘ಜ್ಞಾನಸಂಗಮ’ದ ನೋಟ</p></div>

ಬೆಳಗಾವಿಯ ವಿಟಿಯು ಕ್ಯಾಂಪಸ್‌ ‘ಜ್ಞಾನಸಂಗಮ’ದ ನೋಟ

   

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ವಾರ್ಷಿಕವಾಗಿ ಅಂದಾಜು ₹200 ಕೋಟಿ ನೋಂದಣಿ ಶುಲ್ಕ ಸಂಗ್ರಹವಾಗುತ್ತದೆ. ಇದರಲ್ಲಿ ವೇತನಕ್ಕಾಗಿಯೇ ₹198 ಕೋಟಿ ಹೋಗುತ್ತದೆ. ಇದರಿಂದ ಸಂಶೋಧನೆ, ಕೌಶಲ ಅಭಿವೃದ್ಧಿ ಹಾಗೂ ಅನ್ವೇಷಣಾ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ.

‘ವಿಟಿಯು ಸ್ಥಾಪನೆಗೊಂಡು 26 ವರ್ಷಗಳಾಗಿವೆ. ತಾಂತ್ರಿಕ ವಿಶ್ವವಿದ್ಯಾಲಯವು ತನ್ನ ಆರ್ಥಿಕ ಮೂಲ ತಾನೇ ಸೃಷ್ಟಿಸಿಕೊಳ್ಳಬೇಕು (ಸೆಲ್ಫ್‌ ಫೈನಾನ್ಸ್‌) ಎಂಬ ನಿಯಮ ಇಲ್ಲ. ಯುಜಿಸಿಯಲ್ಲೂ ನಿಯಮಗಳಿಲ್ಲ. ಆದರೆ, ಎಂಜಿನಿಯರಿಂಗ್‌ನಂಥ ವೃತ್ತಿಪರ ಕೋರ್ಸ್‌ಗಳಿಗೆ ಶುಲ್ಕ ಹೆಚ್ಚು ಬರುವುದೆಂದು ಸರ್ಕಾರ ಅನುದಾನ ನೀಡುತ್ತಿಲ್ಲ’ ಎಂದು ವಿಟಿಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವಿಟಿಯು ರಾಜ್ಯದ ಏಕಮಾತ್ರ ಸರ್ಕಾರಿ ತಾಂತ್ರಿಕ ವಿಶ್ವವಿದ್ಯಾಲಯವಾಗಿದ್ದು, ಇದರ ವ್ಯಾಪ್ತಿಯಲ್ಲಿ 3 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ವೇತನ ಅನುದಾನಕ್ಕೆ ವಿಟಿಯು ಸರ್ಕಾರಕ್ಕೆ ಪ್ರತಿ ವರ್ಷ ಮನವಿ ಸಲ್ಲಿಸುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಂದ ಬರುವ ನೋಂದಣಿ ಶುಲ್ಕ ಮಾತ್ರ ಇದಕ್ಕೆ ಜೀವ ಸೆಲೆಯಾಗಿದೆ

ತಾಂತ್ರಿಕ ಕ್ಷೇತ್ರಕ್ಕೆ ಹಿನ್ನಡೆ:

ಬೆಳಗಾವಿಯ ಜ್ಞಾನ ಸಂಗಮ ಮುಖ್ಯ ಕ್ಯಾಂಪಸ್‌ ಸೇರಿ ಮೈಸೂರು, ಕಲಬುರಗಿಯಲ್ಲಿನ ಸ್ನಾತಕೋತ್ತರ ಕೇಂದ್ರ, ದಾವಣಗೆರೆ (ಯುಬಿಡಿಟಿ) ಹಾಗೂ ಚಿಂತಾಮಣಿಯ ಘಟಕ ಕಾಲೇಜು, ದಾಂಡೇಲಿ ಹಾಗೂ ತಳಕಲ್‌ನಲ್ಲಿರುವ ಕೌಶಲ ಅಭಿವೃದ್ಧಿ ಕೇಂದ್ರಗಳು ವಿಟಿಯು ವ್ಯಾಪ್ತಿಗೆ ಬರುತ್ತವೆ.

ವಿಟಿಯು ಮುಖ್ಯ ಕ್ಯಾಂಪಸ್‌ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವೇತನಕ್ಕೆ ವಾರ್ಷಿಕ ₹80 ಕೋಟಿ ಬೇಕು. ದಾವಣಗೆರೆಯ ಯುಬಿಡಿಟಿ ಕಾಲೇಜು ಸಿಬ್ಬಂದಿಗೆ ₹48 ಕೋಟಿ, ಸ್ನಾತಕೋತ್ತರ, ಕೌಶಲ ಕೇಂದ್ರಗಳ ಸಿಬ್ಬಂದಿ ಮತ್ತು 1,600 ಹೊರಗುತ್ತಿಗೆ ನೌಕರರೂ ಸೇರಿ ₹70 ಕೋಟಿ ವಾರ್ಷಿಕವಾಗಿ ಬೇಕು.

‘ತಾಂತ್ರಿಕ ಕ್ಷೇತ್ರಕ್ಕೆ ಹಿನ್ನಡೆಯಾದರೆ, ಅದರ ಪರಿಣಾಮ ಕೃಷಿ, ಕೈಗಾರಿಕೆ ಮತ್ತು ಸಾಮಾಜಿಕ ಅಭಿವೃದ್ಧಿ ಮೇಲೆ ಆಗುತ್ತದೆ. ಆಧುನಿಕ ಜಗತ್ತಿಗೆ ಸೂಕ್ತ ಮಾನವ ಸಂಪನ್ಮೂಲ ಸಿದ್ಧಗೊಳಿಸುವ ಸಾಮರ್ಥ್ಯ ವಿಟಿಯುಗೆ ಇದೆ. ವರ್ಷಕ್ಕೆ ಎರಡು ಘಟಿಕೋತ್ಸವ ಮಾಡುತ್ತೇವೆ. ಪರೀಕ್ಷೆ ಮುಗಿದ ಮೂರು ಗಂಟೆಯಲ್ಲಿ ಫಲಿತಾಂಶ ನೀಡುತ್ತೇವೆ. ಇಂಥ ಸುಧಾರಣಾ ಕ್ರಮಗಳಿಗೆ ಆರ್ಥಿಕ ಮುಗ್ಗಟ್ಟು ಕಾಡುತ್ತಿದೆ’ ಎಂದು ವಿದ್ಯಾಶಂಕರ ತಿಳಿಸಿದರು.

ಬೆಳಗಾವಿಯ ವಿಟಿಯು ಕ್ಯಾಂಪಸ್‌ ‘ಜ್ಞಾನಸಂಗಮ’ದ ನೋಟ

ವೇತನ ಅನುದಾನ ನೀಡಿದರೆ ವಿಶ್ವವಿದ್ಯಾಲಯದ ದೊಡ್ಡ ಕೊರತೆ ನೀಗುತ್ತದೆ. ವಾರ್ಷಿಕ ಅನುದಾನವಾಗಿ ₹100 ಕೋಟಿ ನೀಡಿದರೂ ಸಾಕಷ್ಟು ಬೆಳವಣಿಗೆ ಸಾಧ್ಯವಾಗಲಿದೆ
ಪ್ರೊ.ಎಸ್‌.ವಿದ್ಯಾಶಂಕರ ಕುಲಪತಿ ವಿಟಿಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.