ಮೂಡಲಗಿ: ಮೂಡಲಗಿ ಶೈಕ್ಷಣಿಕ ತಾಲ್ಲೂಕಿನ ಬಳೋಬಾಳದ ಗ್ರಾಮದಲ್ಲಿ ಮನೆ, ಮನೆಯಲ್ಲಿ ಯೋಗ ಪಟುಗಳು ಇದ್ದಾರೆ. ಕಳೆದ ಒಂದೂವರೆ ದಶಕದಿಂದ ಈ ಗ್ರಾಮದ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಮೂರು ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ಇಲ್ಲಿ ನಿತ್ಯವೂ ಯೋಗ ದಿನಾಚರಣೆಯ ವಾತಾವರಣವೇ ಇರುತ್ತದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಸಪ್ಪ ಬಡವಣ್ಣಿ ಈ ಊರಿಗೆ ಯೋಗ ತಂದುಕೊಟ್ಟವರು. ಮಕ್ಕಳು ಹಾಗೂ ಮಕ್ಕಳ ಮೂಲಕ ಪಾಲಕರಿಗೂ ಯೋಗವನ್ನು ಕಲಿಸಿದ್ದಾರೆ.
ಪ್ರತಿ ವರ್ಷ ಶಾಲೆಯಲ್ಲಿ ಬಾಲಕ, ಬಾಲಕಿಯರ ಯೋಗಾಭ್ಯಾಸಕ್ಕಾಗಿ ತಂಡ ಕಟ್ಟುತ್ತಾರೆ. 3ನೇ ತರಗತಿಯಲ್ಲಿಯ ಪುಟಾಣಿಗಳನ್ನು ಯೋಗಕ್ಕೆ ಆಯ್ಕೆ ಮಾಡುತ್ತಾರೆ. ನಿತ್ಯ ಬೆಳಿಗ್ಗೆ ಮತ್ತು ಶಾಲೆ ಮುಗಿದ ನಂತರ ತಪ್ಪದೆ ಯೋಗದಲ್ಲಿ ಮಕ್ಕಳಿಗೆ ಅಭ್ಯಾಸ ಮಾಡಿಸುವುದು ಇವರ ರೂಢಿ.
ಪ್ರತಿ ವರ್ಷ ಕನಿಷ್ಠ 5 ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್‌ರಾಗಿ ಪದಕಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಸೌಜನ್ಯ ತುಪ್ಪಾರೊಟ್ಟಿ, ಲಕ್ಷ್ಮೀ ರಮೇಶನವರ, ಲಕ್ಷ್ಮೀ ಪಾಟೀಲ, ಸುಷ್ಮಾ ಬಳೋಬಾಳ, ಸೌಜನ್ಯ ದುರ್ಗಿ, ದೀಪಾ ಲೋಹಾರ, ಸೃಷ್ಟಿ ಬಳೋಬಾಳ, ಸಾಕ್ಷಿ ಕಳಸನ್ನವರ, ಕಾವೇರಿ ಸಂಕನ್ನವರ, ಚೈತ್ರಾ ಹೂಲಿಕಟ್ಟಿ, ಸಂಜು ಘೋಡಗೇರಿ ಹಲವು ಮಕ್ಕಳು 2009ರಿಂದ ಈವರೆಗೆ ರಾಷ್ಟ್ರ ಮಟ್ಟದ ಯೋಗಾ ಸ್ಪರ್ಧೆಯಲ್ಲಿ ಭಾಗವಹಿಸಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಬಾಚಿಕೊಂಡಿದ್ದಾರೆ.
50 ಆಸನಗಳಲ್ಲಿ ಪರಿಣಿತಿ: ಮಕ್ಕಳು 50 ವಿಧದ ಯೋಗಾಸನಗಳಲ್ಲಿ ಪರಿಣತಿ ಸಾಧಿಸಿದ್ದು, ಎಲ್ಲವನ್ನು ಲೀಲಾಜಾಲವಾಗಿ ಮಾಡಬಲ್ಲರು. ಲಿಖಿರಾಸನ, ಪದ್ಮವೃಚ್ಛಿಕಾಸನ, ಹಸ್ತಮುಕ್ತ ವೃಚ್ಛಕಾಸನ, ವಾಮದೇವಾಸನ ಗಳಂತಹ ಕಠಿಣ ಆಸನಗಳನ್ನು ಸುಲಭವಾಗಿ ಮಾಡುತ್ತಾರೆ.
ನಾನು 3ನೇ ತರಗತಿಯಲ್ಲಿ ಯೋಗ ತರಬೇತಿ ಪಡೆದೆ. ತರಬೇತಿ ನೀಡಿದ ಬಡವಣ್ಣಿ ಗುರುಗಳೇ ನನ್ನ ಸಾಧನೆಗೆ ಕಾರಣ. ದಿನವೂ ಯೋಗ ಮಾಡುತ್ತೇನೆ.– ನಿರ್ಮಲಾ ಕೊಡ್ಲಿಕಾರ, ಯೋಗಪಟು ಮೂಡಲಗಿ
ಪಾಲಕರು ಸಹಕಾರ ನೀಡುತ್ತಿರುವುದರಿಂದ ಮಕ್ಕಳು 7ನೇ ತರಗತಿಯವರೆಗೆ ಯೋಗಾಭ್ಯಾಸ ಮುಂದುವರಿಸುತ್ತಾರೆ. ಕೆಲವರು ಮುಂದೆ ಪದವಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಮುಂದುವರಿಸಿದ್ದಾರೆ.– ಬಸಪ್ಪ ಬಡವಣ್ಣಿ, ದೈಹಿಕ ಶಿಕ್ಷಣ ಶಿಕ್ಷಕ ಸರ್ಕಾರಿ ಪ್ರಾಥಮಿಕ ಶಾಲೆ ಬಳೋಬಾಳ
ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು
ವಿಯೆಟ್ನಾಂದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ 2ನೇ ಯೋಗ ಸ್ಪರ್ಧೆಯಲ್ಲಿ ನಿರ್ಮಲಾ ಕೊಡ್ಲಿಕಾರ ‘ಯೋಗ ರತ್ನ’ ಪ್ರಶಸ್ತಿಯೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
14 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪೂರ್ತಿ ಬಡವಣ್ಣಿ ಚಿನ್ನದ ಪದಕ ನಿರ್ಮಲಾ ಕೊಡ್ಲಿಕಾರ ಖೇಲೋ ಇಂಡಿಯಾಕ್ಕೆ ಆಯ್ಕೆ ಮತ್ತು 2026ರಲ್ಲಿ ಜಪಾನಿನಲ್ಲಿ ಜರುಗುವ ಏಷ್ಯನ್ ಗೇಮ್ಸ್ ಯೋಗ ಸ್ಪರ್ಧೆಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. 2017ರಿಂದ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಚಾಂಪಿಯಿನ್ ಆಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.