ಬೆಳಗಾವಿ ತಾಲ್ಲೂಕಿನ ಹಲಗಾದಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ
ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಬೆಳಗಾವಿ: ತಾಲ್ಲೂಕಿನ ಹಲಗಾ ಗ್ರಾಮದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣಕ್ಕೆ 2011ರಲ್ಲೇ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಅದಾಗಿ 14 ವರ್ಷಗಳಾದರೂ ಕಾಮಗಾರಿ ಮುಗಿದಿಲ್ಲ. ಇದರಿಂದ ಬಾಧಿತ ಜನರಿಗೆ ಕಿಟಿಕಿಟಿ (ಕಿರಿಕಿರಿ) ತಪ್ಪಿಲ್ಲ.
‘ಅಮೃತ–1’ ಯೋಜನೆಯಡಿ ಕೈಗೆತ್ತಿಕೊಂಡ ಈ ಕಾಮಗಾರಿಗೆ ಫಲವತ್ತಾದ ಕೃಷಿಭೂಮಿ ಕೊಟ್ಟ ರೈತರು ಹೆಚ್ಚಿನ ಪರಿಹಾರಕ್ಕೆ ಪಟ್ಟು ಹಿಡಿದ ಕಾರಣ, 2023ರ ಅಕ್ಟೋಬರ್‌ನಲ್ಲಿ ಸ್ಥಗಿತಗೊಂಡ ಕೆಲಸ ಇನ್ನೂ ಆರಂಭವಾಗಿಲ್ಲ.
ಈ ಯೋಜನೆ ಕುಂಟುತ್ತ, ತೆವಳುತ್ತ ಸಾಗಿದ್ದು, ಯೋಜನಾ ವೆಚ್ಚವೂ ಹೆಚ್ಚುತ್ತ ಹೋಗಿದೆ. ಇಷ್ಟೊತ್ತಿಗೆ ಕಾರ್ಯಾರಂಭ ಮಾಡಬೇಕಿದ್ದ ಎಸ್‌ಟಿಪಿ ಕಾಮಗಾರಿ ವಿಳಂಬವಾಗಿರುವುದಕ್ಕೆ ಬೆಳಗಾವಿಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಎಸ್‌ಟಿಪಿ ನಿರ್ಮಾಣಕ್ಕೆ ಭೂಮಿ ಕೊಟ್ಟ ಮಾಲೀಕರಿಗೆ ಪ್ರಸ್ತುತ ಮಾರುಕಟ್ಟೆ ದರದ ಅನ್ವಯ, ಹೆಚ್ಚುವರಿ ವ್ಯತ್ಯಾಸದ ಮೊತ್ತವಾದ ₹6.73 ಕೋಟಿ ಒದಗಿಸಬೇಕು’ ಎಂಬ ನಿರ್ಣಯವನ್ನು ಈಚೆಗೆ ನಡೆದ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
‘ಈ ನಿರ್ಣಯದಂತೆ ರೈತರಿಗೆ ತ್ವರಿತವಾಗಿ ಪರಿಹಾರ ನೀಡಿ, ಬೇಗ ಕಾಮಗಾರಿ ಪೂರ್ಣಗೊಳಿಸಬೇಕು’ ಎಂಬ ಒತ್ತಾಯ ಕೇಳಿಬರುತ್ತಿದೆ.
ಜೀವಜಲ ಕಲುಷಿತ:
ಬೆಳಗಾವಿ ನಗರವೀಗ ವೇಗವಾಗಿ ಬೆಳೆಯುತ್ತಿದೆ. ಆದರೆ, ಇಂದಿಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಹೊಂದಲು ಸಾಧ್ಯವಾಗಿಲ್ಲ. ಇದರಿಂದ ನಗರ ವ್ಯಾಪ್ತಿಯಲ್ಲಿನ ಒಳಚರಂಡಿಗಳ ಕೊಳಚೆ ನೀರು ಬಳ್ಳಾರಿ ನಾಲೆ ಮೂಲಕ ನದಿಗಳು, ಕೆರೆ–ಕಟ್ಟೆ ಸೇರುತ್ತಿರುವುದರಿಂದ ಜೀವಜಲ ಕಲುಷಿತಗೊಳ್ಳುತ್ತಿದೆ.
ಬೆಳಗಾವಿ, ಹುಕ್ಕೇರಿ, ಗೋಕಾಕ ತಾಲ್ಲೂಕುಗಳ ಜನರಿಗೆ ಸಮಸ್ಯೆಯಾಗುತ್ತಿದೆ. ಬಳ್ಳಾರಿ ನಾಲೆ ಬಳಿ ಇರುವ ಅಂತರ್ಜಲ ಮೂಲಗಳು ಕಲುಷಿತಗೊಂಡು, ತೆರೆದ ಬಾವಿ ಮತ್ತು ಕೊಳವೆಬಾವಿಗಳ ನೀರು ಬಳಕೆಗೆ ಜನರು ಹಿಂದೇಟು ಹಾಕುತ್ತಿದ್ದಾರೆ.
ಇದಕ್ಕೆ ಪರಿಹಾರ ಒದಗಿಸಲೆಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲಗಾದಲ್ಲಿ 70 ದಶಲಕ್ಷ ಲೀಟರ್ ಸಾಮರ್ಥ್ಯದ ಎಸ್‌ಟಿಪಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಪರಿಹಾರ ಮೊತ್ತದ ವಿಚಾರವಾಗಿ ರೈತರು ತಕರಾರು ಎತ್ತಿದರು. ‘ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹೆಚ್ಚಿನ ಪರಿಹಾರ ಕೊಡಿ. ಇಲ್ಲವೇ ನಮ್ಮ ಭೂಮಿ ನಮಗೆ ವಾಪಸ್ ಕೊಟ್ಟು ಬಿಡಿ’ ಎಂದು ಪಟ್ಟು ಹಿಡಿದರು.
ಇದರ ಮಧ್ಯೆಯೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಎಸ್‌ಡಿಬಿ) ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದರು. ಇದನ್ನು ವಿರೋಧಿಸಿ ರೈತರು ನಿರಂತರ ಪ್ರತಿಭಟನೆ ನಡೆಸಿದ್ದರು. ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಎಸ್‌ಟಿಪಿ ನಿರ್ಮಾಣಕ್ಕೆ ರೈತರಿಂದ 19 ಎಕರೆ, 9 ಗುಂಟೆ ಜಮೀನನ್ನು 2011ರಲ್ಲಿ ಪಡೆದುಕೊಂಡಿದ್ದೇವೆ. ಕಾಮಗಾರಿಗಾಗಿ ಅದನ್ನು ಕೆಯುಡಬ್ಲ್ಯುಎಸ್‌ಡಿಬಿಗೆ ಹಸ್ತಾಂತರಿಸಿದ್ದೇವೆಶ್ರವಣಕುಮಾರ ನಾಯ್ಕ, ಉಪವಿಭಾಗಾಧಿಕಾರಿ, ಬೆಳಗಾವಿ
ನಾವು ಈ ಭೂಮಿಯಲ್ಲಿ ಭತ್ತ, ಚನ್ನಂಗಿ, ವಿವಿಧ ತರಕಾರಿ ಬೆಳೆದು ಬದುಕು ಸಾಗಿಸುತ್ತಿದ್ದೆವು. ನಮ್ಮ ಕಡೆಯಿಂದ ಒತ್ತಾಯ ಪೂರ್ವಕವಾಗಿ ಭೂಮಿ ಪಡೆದು, ಬೇಡಿಕೆಯಂತೆ ಪರಿಹಾರ ಕೊಡದೆ 14 ವರ್ಷಗಳಿಂದ ಸತಾಯಿಸುತ್ತಿದ್ದಾರೆಮಹಾವೀರ ಗಂದಿಗವಾಡ, ರೈತ, ಹಲಗಾ
ಎಸ್‌ಟಿಪಿ ನಿರ್ಮಾಣಕ್ಕೆ ಪಡೆದಿರುವ ಭೂಮಿಗೆ ಹೆಚ್ಚಿನ ಪರಿಹಾರವನ್ನು ತ್ವರಿತವಾಗಿ ಕೊಡಬೇಕು. ವಿಳಂಬ ಮಾಡಬಾರದುಅಪ್ಪಾಸಾಹೇಬ ಇಂಚಲ, ರೈತ, ಹಲಗಾ
‘ಎಸ್‌ಟಿಪಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಶೇ 90ರಷ್ಟು ಕಾಮಗಾರಿ ಮುಗಿದಿದೆ. ವಿವಿಧ ಯಂತ್ರಗಳ ಅಳವಡಿಕೆ ಬಾಕಿ ಇದೆ. ಪರಿಹಾರ ಮೊತ್ತದ ವಿಚಾರವಾಗಿ ರೈತರು ತಕರಾರು ಎತ್ತಿದ್ದರಿಂದ ಕಾಮಗಾರಿ ನಿಂತಿದೆ. ಈ ಸಮಸ್ಯೆ ಬಗೆಹರಿದರೆ ಕಾಮಗಾರಿ ಆರಂಭಿಸುತ್ತೇವೆ. ಘಟಕ ನಿರ್ಮಾಣವಾದ ನಂತರ ಒಳಚರಂಡಿಗಳ ಕೊಳಚೆ ನೀರನ್ನು ಸಂಸ್ಕರಿಸಿ ನಾಲೆಗೆ ಬಿಡುತ್ತೇವೆ’ ಎಂದು ಕೆಯುಡಬ್ಲ್ಯುಎಸ್‌ಡಿಬಿ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.