ADVERTISEMENT

ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸುವವರ ವಿರುದ್ಧ ಕ್ರಮ: ಸಚಿವ ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 13:12 IST
Last Updated 10 ಏಪ್ರಿಲ್ 2022, 13:12 IST
ಸಚಿವ ಜೆ.ಸಿ. ಮಾಧುಸ್ವಾಮಿ
ಸಚಿವ ಜೆ.ಸಿ. ಮಾಧುಸ್ವಾಮಿ   

ಬೆಳಗಾವಿ: ಮುಸ್ಲಿಂ ವರ್ತಕರು ವ್ಯಾಪಾರ ಮಾಡುವುದಕ್ಕೆ ಹಿಂದೂ ಸಂಘಟನೆಗಳವರು ನಿರ್ಬಂಧ ವಿಧಿಸುತ್ತಿರುವುದಕ್ಕೆ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ನಿಪ್ಪಾಣಿಯಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಇಂತಹ ನಿರ್ಬಂಧಗಳಿಗೆ ಸರ್ಕಾರದ ಬೆಂಬಲವಿಲ್ಲ. ಹಿಂದೂಪರ ಸಂಘಟನೆಗಳವರು ಯಾಕೆ ಮಾಡುತ್ತಿದ್ದಾರೆ? ಮಿತಿ ಮೀರಿದರೆ, ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಕ್ರಮ ವಹಿಸಿಯೇ ತೀರುತ್ತದೆ. ಇದರಲ್ಲಿ ಎರಡು ಮಾತಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಈ ದೇಶ ಎಲ್ಲರಿಗೂ ಸೇರಿದ್ದು. ಸ್ವಾತಂತ್ರ್ಯ ಪಡೆದಾಗ ಇಲ್ಲಿ ಉಳಿದವರೆಲ್ಲರೂ ಭಾರತೀಯರೇ. ಈಗ ವಿವಾದ ಸೃಷ್ಟಿಸುವುದರಲ್ಲಿ ಅರ್ಥವಿಲ್ಲ. ಅಂತಹ ಚಟುವಟಿಕೆಗಳಿಗೆ ಸರ್ಕಾರ ಹೆಚ್ಚು ಆದ್ಯತೆ ಕೊಡುವುದಿಲ್ಲ. ಒಂದೊಂದ್ ಕಡೆ, ಯಾವ್ಯಾವ ದಿಕ್ಕಿಗೆ ಬೇಕೋ ಆ ದಿಕ್ಕಿಗೆ ಎಳೆದುಕೊಂಡು ಹೋಗಲಾಗುತ್ತಿದೆ. ಇದನ್ನು ಹತೋಟಿಗೆ ತರಲು ನಾವು ಖಂಡಿತ ಪ್ರಯತ್ನಿಸುತ್ತೇವೆ. ಹೀಗೆಯೇ ಮುಂದುವರಿಯಬಾರದು. ಇದನ್ನು ಯಾವ ನಾಗರಿಕರೂ ಒಪ್ಪುವಂಥದ್ದಲ್ಲ’ ಎಂದು ಸಂಘಟನೆಗಳ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದರು.

ADVERTISEMENT

ಧಾರವಾಡದಲ್ಲಿ ಮುಸ್ಲಿಮರ ಅಂಗಡಿ ಧ್ವಂಸಗೊಳಿಸಿದ ಘಟನೆ ಬಗ್ಗೆ ಪ್ರಕ್ರಿಯಿಸಿದ ಅವರು, ‘ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುವವರು ಅಥವಾ ಗಲಾಟೆ ಮಾಡುತ್ತಿರುವವರ ಮೇಲೆ ಕ್ರಮ ಜರುಗಿಸುತ್ತೇವೆ. ಅವರು ಮಾಡುತ್ತಿರುವುದು ತಪ್ಪು. ದೇಶದಲ್ಲಿ ವ್ಯಾಪಾರ ಮಾಡಲು ಸಂವಿಧಾನಾತ್ಮಕವಾಗಿ ಎಲ್ಲರಿಗೂ ಹಕ್ಕಿದೆ. ಮನೆಯೊಳಗೆ ಪೂಜೆ ಸಲ್ಲಿಸುವುದು ವೈಯಕ್ತಿಕ ಹಕ್ಕು. ಸಾರ್ವಜನಿಕವಾಗಿ ಯಾರನ್ನೂ ಅವಹೇಳನ ಅಥವಾ ಯಾರನ್ನೋ ಪುರಸ್ಕರಿಸುವುದನ್ನು ಮಾಡುವಂತೆ ಸಂವಿಧಾನ ಹೇಳಿಲ್ಲ. ಕಾನೂನು ಉಲ್ಲಂಘಿಸುವವರನ್ನು ಪ್ರೋತ್ಸಾಹಿಸುವುದಿಲ್ಲ’ ಎಂದರು.

ಗೃಹ ಸಚಿವರು ತಡೆದು ಮಾತನಾಡಬೇಕಿತ್ತು: ‘ಬೆಂಗಳೂರಿನ ಯುವಕ ಚಂದ್ರು ಕೊಲೆ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿದ್ದ ಹೇಳಿಕೆಯನ್ನು ಕೂಡಲೆ ತಿದ್ದಿಕೊಂಡಿದ್ದಾರೆ. ಆದಾಗ್ಯೂ ವಿವಾದ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಸಿಕ್ಕ ಮಾಹಿತಿಯನ್ನು ತಕ್ಷಣ ಹೇಳಿದ್ದಾರೆ. ಅದನ್ನು ಬಿಟ್ಟರೆ ಬೇರೇನೂ ತಪ್ಪಾಗಿಲ್ಲ. ಸಿಐಡಿ ತನಿಖೆಯಾಗಿ ಸತ್ಯ ಹೊರಬರಲಿ ಬಿಡಿ’ ಎಂದು ಹೇಳಿದರು.

‘ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ. ಈ ವಿವಾದದಲ್ಲಿ ಅಧಿಕಾರಿಗಳೇನೂ ತಿರುಗಿ ಬಿದ್ದಿಲ್ಲ. ಯಾರೋ ಕೊಟ್ಟ ಮಾಹಿತಿಯನ್ನು ಸಚಿವರು ತಕ್ಷಣ ಹೇಳಿಬಿಟ್ಟಿದ್ದಾರಷ್ಟೆ. ಒಂದೆರಡು ನಿಮಿಷ ತಡೆದು ಮಾತನಾಡಬೇಕಿತ್ತು ಎನ್ನುವುದು ನನ್ನ ಭಾವನೆ’ ಎಂದರು.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಇದ್ದರು.

ಅಸಮಾಧಾನದ ಪ್ರಶ್ನೆ ಉದ್ಭವಿಸದು: ಸಂಜೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವರು, ‘ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬಿತ್ಯಾದಿಯಾಗಿ ಹೇಳಿದ್ದೇನೆಂದು ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದೆ ಎಂದು ಗೊತ್ತಾಗಿದೆ. ಸರ್ಕಾರದಲ್ಲಿದ್ದುಕೊಂಡು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಯಾವತ್ತೂ ಉದ್ಭವವಾಗಿಲ್ಲ. ಆ ರೀತಿ ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಈಗ ನಡೆಯುತ್ತಿರುವ ಅಭಿಯಾನಗಳಿಗೆ, ವಿವಾದಗಳಿಗೆ ಸರ್ಕಾರ ಜವಾಬ್ದಾರಿಯಲ್ಲ. ಯಾವ ಸರ್ಕಾರವೂ ವಿವಾದ ಸೃಷ್ಟಿಸಲು ಇರುವುದಿಲ್ಲ. ಬಗೆಹರಿಸಲು ನಾವು ಸರ್ಕಾರ ನಡೆಸುತ್ತಿದ್ದೇವೆ. ಕಾನೂನನ್ನು ಎಲ್ಲರೂ ಗೌರವಿಸಬೇಕು. ‘ಸರ್ಕಾರವಾಗಿ ಎಲ್ಲರ ಹಿತರಕ್ಷಣೆಗೆ ನಾವು ಕೆಲಸ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.