
ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿ ವಿಜಯೋತ್ಸವ ಆಚರಿಸಿ ರೈತ ಮುಖಂಡ ಶಶಿಕಾಂತ ಗುರೂಜಿ ಮಾತನಾಡಿದರು .
ಮೂಡಲಗಿ: ಸರ್ಕಾರವು ಕಬ್ಬಿಗೆ ₹3300 ಬೆಲೆ ಘೋಷಿಸುತ್ತಿದ್ದಂತೆ ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಹಸಿರು ಟವೆಲ್ ಹಾರಿಸಿ, ಪರಸ್ಪರ ಗುಲಾಲು ಹಾಕಿಕೊಂಡು ಕುಣಿದು ಕುಪ್ಪಿಸಿದರು.
ಜೈ ಜವಾನ್ ಜೈ ಕಿಸಾನ್ ಎಂದು ಜಯಘೋಷಣೆಗಳನ್ನು ಹಾಕಿದರು. ಬಹಳ ಹೊತ್ತಿನವರೆಗೆ ಪಟಾಕಿ ಸಿಡಿಸಿ ಈ ಬಾರಿ ದೀಪವಾಳಿಯಿಂದ ವಂಚಿತರಾಗಿದ್ದ ರೈತರು ದೀಪಾವಳಿ ಆಚರಿಸಿ ಸಂಭ್ರಮಿಸಿದರು.
ಕಳೆದ 9 ದಿನಗಳಿಂದ ಗುರ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಮಳೆ, ಬಿಸಿಲು ಎನ್ನದೆ ಅಹೋರಾತ್ರಿ ಧರಣಿ ನಡೆಸಿದ್ದ ರೈತರು ಸಿಹಿ ಸುದ್ದಿ ಕೇಳಿ ಪರಸ್ಪರ ಸಿಹಿ ಹಂಚಿದರು.
ಹೋರಾಟದ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿ ’ಇದು ರೈತರ ಹೋರಾಟಕ್ಕೆ ದೊರೆತ ವಿಜಯ. ಗುರ್ಲಾಪುರ ಕ್ರಾಸ್ ಬಳಿಯಲ್ಲಿ ರೈತರ ಶಕ್ತಿ ಏನೆಂಬುದನ್ನು ಇಡೀ ದೇಶಕ್ಕೆ ಗೊತ್ತಾಯಿತು. ಮುಖ್ಯಮಂತ್ರಿಗಳೊಂದಿಗ ಚರ್ಚಿಸದೆ ಧರಣಿ ಸ್ಥಳದಲ್ಲಿಯೇ ನಮ್ಮ ಬೇಡಿಕೆ ಈಡೇರಿಸಿಕೊಂಡಿರುವುದು ರೈತರ ಹೋರಾಟದ ಐತಿಹಾಸಿಕ ವಿಜಯವಾಗಿದೆ’ ಎಂದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೂಣಪ್ಪ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ರೈತ ಹೋರಾಟವು ಅತ್ಯಂತ ಶಿಸ್ತುಬದ್ಧ ಹೋರಾಟವಾಗಿದೆ.
ಹತ್ತರಗಿ ಹೆದ್ದಾರಿಯಲ್ಲಿ ಕಲ್ಲು ಒಗೆದವರು ರೈತರು ಅಲ್ಲ, ಅದು ಕಿಡಿಗೇಡಿಗಳ ಕೆಲಸವಾಗಿದೆ. ಹೋರಾಟವನ್ನು ಒಡೆಯುವ ಕುತಂತ್ರಿಗಳ ಕೆಲಸವಾಗಿತ್ತು. ಸ್ವಾಭಿಮಾನಿ ರೈತರ ಹೋರಾಟಕ್ಕೆ ದೊರೆತ ವಿಜಯವಾಗಿದೆ. ಹೋರಾಟವನ್ನು ನಿಲ್ಲಿಸುತ್ತೇವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.