ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಗುರುವಾರ, ರೈತರು ಸಚಿವರ ಶಿವಾನಂದ ಪಾಟೀಲ ಅವರ ಅಣಕು ಶವಯಾತ್ರೆ ಮಾಡಿದರು. ಶ್ರದ್ಧಾಂಜಲಿಯ ಬ್ಯಾನರ್‌ಗಳನ್ನೂ ಹಾಕಿ ಆಕ್ರೋಶ ಹೊರಹಾಕಿದರು
ಗುರ್ಲಾಪುರ (ಬೆಳಗಾವಿ ಜಿಲ್ಲೆ): ಕಬ್ಬಿಗೆ ₹3,500 ದರ ನೀಡಬೇಕು ಎಂದು ಆಗ್ರಹಿಸಿ ರೈತರು, ಮೂಡಲಗಿ ತಾಲ್ಲೂಕಿನ ಗುರ್ಲಾಪುರದಲ್ಲಿ ನಡೆಸಿರುವ ಅನಿರ್ದಿಷ್ಟಾವಧಿ ಧರಣಿ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಕಾರರು, ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಅಣಕು ಶವಯಾತ್ರೆ ನಡೆಸಿದರು. ‘ಸತ್ತುಹೋದ ಸಕ್ಕರೆ ಸಚಿವ’ ಎಂಬ ಬ್ಯಾನರ್ ಹಾಕಿ, ಬಾಯಿ ಬಾಯಿ ಬಡಿದುಕೊಂಡು ಅತ್ತರು.
ಜಿಲ್ಲೆಯ ವಿವಿಧೆಡೆಯಿಂದ 50ಕ್ಕೂ ಹೆಚ್ಚು ಮಠಾಧೀಶರು ಕೂಡ ರೈತರ ಧರಣಿ ಬೆಂಬಲಿಸಿ ಪಾಲ್ಗೊಂಡರು. ಹಲವು ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳೂ ಗುರ್ಲಾಪುರದತ್ತ ಧಾವಿಸಿದರು.
ರೈತರ ಹೋರಾಟ ಬೆಂಬಲಿಸಿ ಬೆಳಗಾವಿ ನಗರದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಬ್ಬಿನ ಜಲ್ಲೆ ಹೊತ್ತುಕೊಂಡು ಮೆರವಣಿಗೆ ನಡೆಸಿದರು
ರೈತರ ಬಗ್ಗೆ ಕನಿಷ್ಠ ಕಾಳಜಿ ತೋರದ ಸರ್ಕಾರಕ್ಕೆ ಧಿಕ್ಕಾರ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ‘ಇದ್ದೂ ಸತ್ತಂತೆ’ ಎಂದು ಘೋಷಣೆ ಮೊಳಗಿಸಿದರು. ತಾಳ್ಮೆ ಕಟ್ಟೆಯೊಡೆದಂತೆ ರೈತರು ಕಟು ಪದಗಳಲ್ಲಿ ಖಂಡಿಸಿದರು.
ಮೂಡಲಗಿ ಸಂಪೂರ್ಣ ಬಂದ್:
ರೈತರ ಹೋರಾಟ ಬೆಂಬಲಿಸಿ ಗುರುವಾರ, ಮೂಡಲಗಿ ಬಂದ್ ಆಚರಿಸಲಾಯಿತು
ರೈತರ ಹೋರಾಟ ಬೆಂಬಲಿಸಿ ಮೂಡಲಗಿ ಬಂದ್ ಮಾಡಲಾಯಿತು. ವ್ಯಾಪಾರಿಗಳು, ಖಾಸಗಿ ವಾಹನಗಳ ಮಾಲೀಕರು, ಶಾಲೆ– ಕಾಲೇಜಗಳ ವಿದ್ಯಾರ್ಥಿಗಳೂ ಇದಕ್ಕೆ ಬೆಂಬಲ ಸೂಚಿಸಿದರು. ಪಟ್ಟಣದ ಎಲ್ಲ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದಲೇ ಅಂಗಡಿ– ಮುಂಗಟ್ಟುಗಳನ್ನು ಬಂದ್ ಮಾಡಿದರು. ಮುಖ್ಯ ಮಾರುಕಟ್ಟೆಗಳ ಎಲ್ಲ ಮಳಿಗೆಗಳು ಬಾಗಿಲು ಮುಚ್ಚಿದ್ದರಿಂದ ಇಡೀ ಪಟ್ಟಣ ಬಿಕೋ ಎಂದಿತು.
ಮುಗಳಖೋಡದ ಯುವಕರೂ ಧರಣಿ ಬೆಂಬಲಿಸಿ, ಬೈಕ್ ಜಾಥಾ ನಡೆಸಿದರು. ಅಪಾರ ಸಂಖ್ಯೆಯ ಯುವಕರು ಮುಗಳಖೋಡದಿಂದ ಗುರ್ಲಾಪುರದ ಧರಣಿ ಸ್ಥಳದವರೆಗೂ ರ್‍ಯಾಲಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.