
ಗುರ್ಲಾಪುರ (ಬೆಳಗಾವಿ ಜಿಲ್ಲೆ): ಹೋರಾಟ ಕೈ ಬಿಡುವಂತೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಮಾಡಿಕೊಂಡ ಕೋರಿಕೆಗೂ ರೈತರು ಜಗ್ಗಲಿಲ್ಲ. ಪರಿಪರಿಯಾಗಿ ಮನವಿ ಮಾಡಿಕೊಂಡ ನಂತರ ಎರಡು ದಿನಗಳ ಗಡುವು ನೀಡಲು ಮಾತ್ರ ಒಪ್ಪಿಕೊಂಡರು. ಶುಕ್ರವಾರ (ನ.7)ದಿಂದ ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಹೆದ್ದಾರಿ ಬಂದ್ ಹಾಗೂ ಸಾಮೂಹಿಕ ಆಮರಣ ಉಪವಾಸವನ್ನು ಮುಂದಕ್ಕೆ ಹಾಕಿದರು.
ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಬಳಿ ರಾಜ್ಯ ಹೆದ್ದಾರಿ ಮೇಲೆ ಅನಿರ್ದಿಷ್ಟ ಧರಣಿ ಹಮ್ಮಿಕೊಂಡ ರೈತರನ್ನು ಸಚಿವರು ಗುರುವಾರ ಭೇಟಿ ಮಾಡಿದರು. ಸಚಿವರ ಕಾರು ಸ್ಥಳಕ್ಕೆ ಬರುತ್ತಿದ್ದಂತೆಯೇ ಪ್ರತಿಭಟನಕಾರರು ತೀವ್ರ ಆಕ್ರೋಶ ಹೊರ ಹಾಕಿದರು. ಮಾತನಾಡುವುದಕ್ಕೆ ಬಿಡದೇ ಕೂಗಾಡಿದರು.
‘ಕೈ ಮುಗಿದು ಕೇಳುತ್ತೇನೆ ಎರಡು ದಿನ ಗಡುವು ಕೊಡಿ’ ಎಂದು ಸಚಿವರು ಮನವಿ ಮಾಡಿದರು. ಆ ಪದ ಕಿವಿಗೆ ಬೀಳುತ್ತಿದ್ದಂತೆಯೇ ಸಮೂಹದಿಂದ ಮತ್ತೆ ಕೂಗಾಟ, ಚೀರಾಟ ಜೋರಾಯಿತು.
ಮಧ್ಯ ಪ್ರವೇಶಿಸಿದ ರೈತ ಮುಖಂಡ ಚೂಣಪ್ಪ ಪೂಜಾರಿ ಮುಂತಾದವರು, ‘ಸಚಿವರು ನಮ್ಮ ಸಲುವಾಗಿಯೇ ಬಂದಿದ್ದಾರೆ. ಅವರಿಗೆ ಮಾತಾಡಲು ಬಿಡಿ. ಕಾಲಿಗೆ ಬೀಳುತ್ತೇನೆ’ ಎಂದರು.
‘ನೀವು ಮಾತಾಡು ಎಂದರೆ ಮಾತ್ರ ಮಾತಾಡುತ್ತೇನೆ. ಇಲ್ಲದಿದ್ದರೆ ನಾನೂ ನಿಮ್ಮೊಂದಿಗೆ ಇಲ್ಲೇ ಧರಣಿ ಕುಳಿತುಕೊಳ್ಳುತ್ತೇನೆ’ ಎಂದೂ ಸಚಿವರು ಹೇಳಿದರು.
ಗದ್ದಲದ ಮಧ್ಯೆಯೇ ಮಾತು ಮುಂದುವರಿಸಿದ ಸಚಿವ ಶಿವಾನಂದ ಪಾಟೀಲ ಅವರು, ‘ರೈತರ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ. ಇದು ಅತ್ಯಂತ ಸೂಕ್ಷ್ಮ ವಿಷಯ ಇದೆ. ಚರ್ಚೆ ಮಾಡಬೇಕಿದೆ. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡಬೇಡಿ. ನಿಮ್ಮ ಸಾಮರ್ಥ್ಯ ಏನೆಂದು ಇಡೀ ದೇಶಕ್ಕೆ ತೋರಿಸಿದ್ದೀರಿ. ಕೇಂದ್ರವೇ ಆಗಲಿ, ರಾಜ್ಯ ಸರ್ಕಾರವೇ ಆಗಲಿ ಇಂಥ ದುಃಸ್ಥಿತಿಗೆ ಬಂದು ನಿಲ್ಲಬಾರದು. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದನ್ನು ಎರಡು ದಿನ ಮುಂದಕ್ಕೆ ಹಾಕಿರಿ’ ಎಂದೂ ಕೋರಿದರು.
ಆಗ ರೈತ ಮುಖಂಡರು, ಎರಡು ದಿನ ಗಡುವು ಕೊಡುತ್ತೇವೆ. ಇಲ್ಲಿ ಧರಣಿ ನಿಲ್ಲಿಸುವುದಿಲ್ಲ. ಗಡುವು ಮುಗಿದ ಮೇಲೆ ಮತ್ತೆ ಗಡುವು ಕೇಳಲು ಬಂದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಮುಖಂಡರು ಎಚ್ಚರಿಸಿದರು.
ನಮ್ಮ ಕೈಯಲ್ಲಿ ಇಲ್ಲ: ‘ಕಬ್ಬು ದರ ನಿಗದಿ ಮಾಡುವ ಅಧಿಕಾರ ನಮ್ಮ ಕೈಯಲ್ಲಿ ಇಲ್ಲ. ಕೇಂದ್ರ ಸರ್ಕಾರದ ಕೈಯಲ್ಲಿದೆ. ಆದರೂ ರೈತರಿಗೆ ಸಹಾಯ ಮಾಡಲು ನಮ್ಮ ಸರ್ಕಾರ ಯತ್ನಿಸುತ್ತದೆ’ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೇಂದ್ರದ ಸಕ್ಕರೆ ಸಚಿವರು ಕರ್ನಾಟಕ ರಾಜ್ಯದವರೇ ಇದ್ದಾರೆ. ದುರದೃಷ್ಟವಶಾತ್ ಪ್ರಲ್ಹಾದ್ ಜೋಶಿ ಅವರ ಹೆಸರು ಯಾರೂ ಇಲ್ಲಿಯವರೆಗೂ ತೆಗೆದಿಲ್ಲ. ಶಿವಾನಂದ ಪಾಟೀಲ ಸ್ಥಳಕ್ಕೆ ಬಂದಿಲ್ಲ ಎಂದು ಮಾತ್ರ ಆರೋಪಿಸುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ನ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದಿದ್ದಾರೆ. ಅಲ್ಲಿನ ನಿರ್ಧಾರ ಪ್ರಕಟಿಸುವವರೆಗೆ ರೈತರು ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಬಾರದು’ ಎಂದರು.
‘ರೈತರ ಹೋರಾಟ ಪ್ರಾಮಾಣಿಕವಾದದ್ದು. ಅದರ ಅರಿವು ನಮಗೂ ಇದೆ. ರೈತರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತೇವೆ. ಧರಣಿ ಸ್ಥಳಕ್ಕೆ ಹೋಗದಂತೆ ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದಕ್ಕೂ ಮುನ್ನ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆಗೆ ಸಭೆ ನಡೆಸಿ, ಪರಿಸ್ಥಿತಿಯ ಮಾಹಿತಿ ಪಡೆದರು.
ಬ್ಯಾನರ್ ಅಳವಡಿಸಿ ಶ್ರದ್ಧಾಂಜಲಿ
ಗುರ್ಲಾಪುರದಲ್ಲಿ ಬೆಳಿಗ್ಗೆ ಶಿವಾನಂದ ಪಾಟೀಲ ಅವರ ಅಣಕು ಶವಯಾತ್ರೆ ನಡೆಸಲಾಯಿತು. ‘ಸತ್ತುಹೋದ ಸಕ್ಕರೆ ಸಚಿವ’ ಎಂಬ ಬ್ಯಾನರ್ ಹಾಕಿ ಬಾಯಿ ಬಾಯಿ ಬಡಿದುಕೊಂಡು ಅತ್ತರು. ಜಿಲ್ಲೆಯ ವಿವಿಧೆಡೆಯಿಂದ 25ಕ್ಕೂ ಹೆಚ್ಚು ಮಠಾಧೀಶರು ಕೂಡ ರೈತರ ಧರಣಿ ಬೆಂಬಲಿಸಿ ಪಾಲ್ಗೊಂಡರು. ಹಲವು ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳೂ ಗುರ್ಲಾಪುರದತ್ತ ಧಾವಿಸಿದರು. ರೈತರ ಬಗ್ಗೆ ಕನಿಷ್ಠ ಕಾಳಜಿ ತೋರದ ಸರ್ಕಾರಕ್ಕೆ ಧಿಕ್ಕಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ‘ಇದ್ದೂ ಸತ್ತಂತೆ’ ಎಂದು ಘೋಷಣೆ ಮೊಳಗಿಸಿದರು. ತಾಳ್ಮೆ ಕಟ್ಟೆಯೊಡೆದಂತೆ ರೈತರು ಕಟು ಪದಗಳಲ್ಲಿ ಖಂಡಿಸಿದರು.
ಮೂಡಲಗಿ ಸಂಪೂರ್ಣ ಬಂದ್
ರೈತರ ಹೋರಾಟ ಬೆಂಬಲಿಸಿ ಮೂಡಲಗಿ ಬಂದ್ ಮಾಡಲಾಯಿತು. ವ್ಯಾಪಾರಿಗಳು ಖಾಸಗಿ ವಾಹನಗಳ ಮಾಲೀಕರು ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಬೆಂಬಲ ಸೂಚಿಸಿದರು. ಪಟ್ಟಣದ ಎಲ್ಲ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದಲೇ ಅಂಗಡಿ– ಮುಂಗಟ್ಟುಗಳನ್ನು ಬಂದ್ ಮಾಡಿದರು. ಮುಗಳಖೋಡದ ಯುವಕರೂ ಧರಣಿ ಬೆಂಬಲಿಸಿ ಬೈಕ್ ಜಾಥಾ ನಡೆಸಿದರು.
‘₹3400ಕ್ಕೆ ಒಪ್ಪುತ್ತೇವೆ’
‘ನಾವು ₹3500 ಕೇಳಿದ್ದೇವೆ. ಸರ್ಕಾರ ಈಗಾಗಲೇ ₹3200 ಕೊಡುವುದಾಗಿ ಹೇಳಿದೆ. ನಾವೂ ತುಸು ಹಿಂದೆ ಸರಿಯುತ್ತೇವೆ. ₹3400ಕ್ಕೆ ಒಪ್ಪುತ್ತೇವೆ. ನೀವು ಭರವಸೆ ನೀಡಿದರೆ ಈಗಲೇ ಹೋರಾಟ ನಿಲ್ಲಿಸುತ್ತೇವೆ’ ಎಂದು ರೈತ ಮುಖಂಡರು ಹೇಳಿದರು. ಇದಕ್ಕೂ ರೈತರು ಒಪ್ಪದೇ ಕೂಗಾಡಿದರು. ಈ ಬೆಳವಣಿಗೆಗಳ ಮಧ್ಯೆ ಸಚಿವರು ಮೌನವಾಗಿ ಕುಳಿತರು.
ಸಚಿವರ ಕಾರಿನ ಮೇಲೆ ಚಪ್ಪಲಿ
ಸಚಿವ ಶಿವಾನಂದ ಪಾಟೀಲ ಧರಣಿ ಸ್ಥಳದಿಂದ ಮಾತು ಮುಗಿಸಿ ಹೊರಡುತ್ತಿದ್ದಂತೆಯೇ ಪ್ರತಿಭಟನಾಕಾರರು ಕಾರಿಗೆ ಮುತ್ತಿಗೆ ಹಾಕಿದರು. ಜನಸಂದಣಿ ಕಡೆಯಿಂದ ತೂರಿಬಂದ ಚಪ್ಪಲಿ ಸಚಿವರ ಕಾರಿನ ಮೇಲೆ ಬಿದ್ದಿತು. ಪೊಲೀಸರು ಅದನ್ನು ತೆರವು ಮಾಡಿ ಜನಸಂದಣಿ ಚೆದುರಿಸಿ ಸಚಿವರು ಹೋಗಲು ದಾರಿ ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.