ಬೆಳಗಾವಿ: ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದು 50 ವರ್ಷಗಳಾದ ಹಿನ್ನೆಲೆಯಲ್ಲಿ ‘ಸುವರ್ಣ ಸಂಭ್ರಮ’ ಯೋಜನೆಯಡಿ ಇಲ್ಲಿ ಕೈಗೆತ್ತಿಕೊಂಡಿದ್ದ ‘ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನ’ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಸಾಹಿತ್ಯ, ಜಾನಪದ, ರಂಗಭೂಮಿ ಮತ್ತಿತರ ಚಟುವಟಿಕೆ ಪ್ರೋತ್ಸಾಹಿಸಲು 2008ರಲ್ಲಿ ಬೆಳಗಾವಿಯಲ್ಲಿ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು.
ಮೂರು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ 2009ರಲ್ಲಿ ಚಾಲನೆ ಸಿಕ್ಕಿತು. ಆದರೆ, ಕಾಮಗಾರಿ ಆರಂಭವಾಗಿ 16 ವರ್ಷಗಳಾದರೂ ನೆಲಮಹಡಿಯಷ್ಟೇ ನಿರ್ಮಾಣವಾಗಿದೆ. ಅನುದಾನ ಕೊರತೆಯಿಂದ ಮೊದಲ ಮಹಡಿಯಲ್ಲಿನ ಕಾಮಗಾರಿ ಅರ್ಧಕ್ಕೆ ನಿಂತಿದೆ. ‘ಈ ಕಾಮಗಾರಿ ಮುಗಿಯಲು ಇನ್ನೆಷ್ಟು ವರ್ಷ ಬೇಕು’ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಸೋರುತ್ತಿವೆ ಕಚೇರಿಗಳು: ಈ ಹಿಂದೆ ಕುಮಾರ ಗಂಧರ್ವ ರಂಗಮಂದಿರದ ನೆಲಮಹಡಿಯಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ನಡೆಯುತ್ತಿತ್ತು. ಜೋರಾಗಿ ಮಳೆಯಾದರೆ ಕಚೇರಿಗೆ ನೀರು ನುಗ್ಗಿ, ಕೆಲಸಕ್ಕೆ ತೊಡಕಾಗುತ್ತಿತ್ತು. ಕಡತಗಳೆಲ್ಲ ಹಾಳಾಗುತ್ತಿದ್ದವು.
ಹಾಗಾಗಿ ಈ ಭವನದ ನೆಲಮಹಡಿಗೆ ಆ ಕಚೇರಿ ಸ್ಥಳಾಂತರಿಸಲಾಯಿತು. ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಮತ್ತು ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ನ ಕಚೇರಿಗಳೂ ಇಲ್ಲಿಯೇ ಕಾರ್ಯಾರಂಭ ಮಾಡಿದ್ದು, ಒಂದು ಸಭಾಂಗಣವೂ ಇದೆ.
ಆದರೆ, ಮೊದಲ ಮಹಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ಪೂರ್ಣಗೊಂಡಿಲ್ಲ. ಹಾಗಾಗಿ ಮಳೆಯಾದರೆ ನೆಲಮಹಡಿಯಲ್ಲಿನ ಕಚೇರಿಗಳಿಗೆ ನೀರು ಇಳಿಯುತ್ತಿದೆ.
ಇಕ್ಕಟ್ಟಿನಿಂದ ಕೂಡಿದ ಜಾಗದಲ್ಲಿರುವ ಕಚೇರಿಗಳಲ್ಲಿನ ಪುಸ್ತಕಗಳು, ಕಡತಗಳು ನೆನೆದು ಹಾಳಾಗುತ್ತಿದ್ದು, ಅವುಗಳ ಸಂರಕ್ಷಣೆ ಸವಾಲಾಗಿ ಪರಿಣಮಿಸಿದೆ. ಸಭಾಂಗಣದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಒಪಿ)ನಿಂದ ಮಾಡಿದ್ದ ವ್ಯವಸ್ಥೆಯೂ ಹಾಳಾಗುತ್ತಿದೆ.
‘ಆರಂಭದಲ್ಲಿ ಭವನ ನಿರ್ಮಾಣಕ್ಕೆ ₹1.5 ಕೋಟಿ ಬಿಡುಗಡೆಯಾಗಿತ್ತು. ಇದರಲ್ಲಿನ ₹1 ಕೋಟಿ ಅನುದಾನವನ್ನು ಹುಕ್ಕೇರಿ ತಾಲ್ಲೂಕಿನ ರಕ್ಷಿಯಲ್ಲಿ ಭವನವೊಂದರ ನಿರ್ಮಾಣಕ್ಕೆ ಕೊಡಲಾಯಿತು. ನಂತರ ಬೆಳಗಾವಿಯ ಭವನಕ್ಕೆ ₹1 ಕೋಟಿ ಬರಲಿಲ್ಲ. ಹಾಗಾಗಿ ಲಭ್ಯವಿದ್ದ ಅನುದಾನದಲ್ಲಿ ಒಂದಿಷ್ಟು ಕಾಮಗಾರಿ ಕೈಗೊಂಡಿದ್ದೇವೆ’ ಎಂದು ಅಧಿಕಾರಿಗಳು ಹೇಳುತ್ತಾರೆ.
ಇತ್ತೀಚೆಗೆ ಭವನದ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೇನೆ. ಇದಕ್ಕೆ ಅಗತ್ಯವಿರುವ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದುಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ
ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನ ನಿರ್ಮಾಣಕ್ಕೆ ಬೇಕಿರುವ ಅನುದಾನದ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆವಿದ್ಯಾವತಿ ಭಜಂತ್ರಿ ಉಪನಿರ್ದೇಶಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಮಳೆಗಾಲದಲ್ಲಿ ಕಚೇರಿ ಸಭಾಂಗಣ ಸೋರುತ್ತಿರುವ ಕಾರಣ ದೈನದಿಂದ ಕೆಲಸ ಕಾರ್ಯಕ್ರಮಗಳ ಆಯೋಜನೆಗೆ ತೊಂದರೆಯಾಗುತ್ತಿದೆ. ಮಳೆನೀರಿನಿಂದ ಕೆಲವು ಮಹತ್ವದ ಪುಸ್ತಕ ಬಸವರಾಜ ಕಟ್ಟೀಮನಿ ಅವರ ಭಾವಚಿತ್ರಗಳಿಗೆ ಹಾನಿಯಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇದ್ದು ಸರ್ಕಾರ ಕಾಮಗಾರಿಗೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಬೇಕುಯಲ್ಲಪ್ಪ ಹಿಮ್ಮಡಿ ಅಧ್ಯಕ್ಷ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ
‘ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನವನ್ನು ಮೂರು ಮಹಡಿಯಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು. ಇದರಲ್ಲಿ ನೆಲಮಹಡಿಯಲ್ಲಿ ವಸ್ತು ಸಂಗ್ರಹಾಲಯದ ಪುರಾತತ್ವ ಮತ್ತು ಜಾನಪದ ವಿಭಾಗ ಮೊದಲ ಮಹಡಿಯಲ್ಲಿ ವಸ್ತು ಸಂಗ್ರಹಾಲಯದ ಇತಿಹಾಸ ಸಾಹಿತ್ಯ ಸಾಂಸ್ಕೃತಿಕ ವಿಭಾಗ ಹಾಗೂ ವಿಡಿಯೊ ಕೇಂದ್ರ ಎರಡನೇ ಮಹಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಆರ್ಟ್ ಗ್ಯಾಲರಿ ಗ್ರಂಥಾಲಯ ನಿರ್ಮಾಣಕ್ಕೆ ಯೋಜಿಸಲಾಗಿತ್ತು’ ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.