ADVERTISEMENT

Paris Olympics | ಬೆಳಗಾವಿ: ಕ್ರೀಡಾ ಕುಟುಂಬದ ಶೂಟಿಂಗ್‌ ಕಲಿ ಸ್ವಪ್ನಿಲ್

ಪುಟ್ಟ ಗ್ರಾಮ ಕಂಬಳವಾಡಿಯಯಲ್ಲಿ ಒಲಿಂಪಿಕ್ಸ್‌ ಗೆಲುವಿನ ಸಂಭ್ರಮ

ಇಮಾಮ್‌ಹುಸೇನ್‌ ಗೂಡುನವರ
Published 13 ಆಗಸ್ಟ್ 2024, 5:02 IST
Last Updated 13 ಆಗಸ್ಟ್ 2024, 5:02 IST
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲ್ಲೂಕಿನ ಕಂಬಳವಾಡಿಯಲ್ಲಿ ಸ್ವಪ್ನಿಲ್ ಅವರ ತಂದೆ ಸುರೇಶ ಕುಸಾಳೆ ಮತ್ತು ತಾಯಿ ಅನಿತಾ ಕುಸಾಳೆ
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲ್ಲೂಕಿನ ಕಂಬಳವಾಡಿಯಲ್ಲಿ ಸ್ವಪ್ನಿಲ್ ಅವರ ತಂದೆ ಸುರೇಶ ಕುಸಾಳೆ ಮತ್ತು ತಾಯಿ ಅನಿತಾ ಕುಸಾಳೆ   

ಬೆಳಗಾವಿ: ‘ನನ್ನ ಪುತ್ರನ ಒಂದೂವರೆ ದಶಕದ ಪ್ರಯತ್ನ ಒಂದಿಷ್ಟು ಫಲ ಕೊಟ್ಟಿದೆ. ಈಗ ಕಂಚು ಗೆದ್ದಿರುವ ಆತ ಮುಂದಿನ ಒಲಿಂಪಿಕ್ಸ್‌ನಲ್ಲಿ ಖಂಡಿತ ಚಿನ್ನದ ಪದಕ ಗಳಿಸುವನು ಎಂಬ ವಿಶ್ವಾಸವಿದೆ’

ಹೀಗೆಂದು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡವರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲ್ಲೂಕಿನ ಕಂಬಳವಾಡಿಯ ಸುರೇಶ ಕುಸಾಳೆ.

ಅವರ ಪುತ್ರ ಸ್ಪಪ್ನಿಲ್‌ ಪ್ಯಾರಿಸ್‌ನಲ್ಲಿ ನಡೆದಿರುವ ಒಲಿಂಪಿಕ್ಸ್‌ನ ಶೂಟಿಂಗ್‌ ಸ್ಪರ್ಧೆಯ 50 ಮೀಟರ್‌ ರೈಫಲ್ ತ್ರಿ ಪೊಸಿಷನ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸುರೇಶ ಕುಸಾಳೆ ಅವರಿಗೆ ಮೂವರು ಮಕ್ಕಳು. ಪುತ್ರಿಯ ವಿವಾಹವಾಗಿದೆ. ಹಿರಿಯ ಪುತ್ರ ಸ್ವಪ್ನಿಲ್‌ ಶೂಟಿಂಗ್‌ನಲ್ಲಿ ಸಾಧನೆ ಮಾಡಿದರೆ, ಕಿರಿಯ ಪುತ್ರ ಸೂರಜ್‌ ದೈಹಿಕ ಶಿಕ್ಷಣ ಶಿಕ್ಷಕನಾಗಲು ಎಂಪಿ.ಇಡಿ ಓದುತ್ತಿದ್ದಾರೆ. ಸ್ವಪ್ನಿಲ್‌ ತಾಯಿ ಅನಿತಾ ಶಾಲಾ ಹಂತದಲ್ಲಿ ಕಬಡ್ಡಿ ಆಟಗಾರ್ತಿ ಆಗಿದ್ದರು.

ADVERTISEMENT

‘ನಮ್ಮದು ಶಿಕ್ಷಕರ ಮನೆತನ. ನಾನು ಸೇರಿ ಕುಟುಂಬದ ಹೆಚ್ಚಿನವರು ಶಿಕ್ಷಕರಿದ್ದೇವೆ. ಆದರೆ, ಸ್ವಪ್ನಿಲ್‌ಗೆ ಕ್ರೀಡೆ ಬಗ್ಗೆ ಹೆಚ್ಚು ಆಸಕ್ತಿ. ಅದಕ್ಕೆ ಆರಂಭದಲ್ಲಿ ಸೈಕ್ಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಆತನನ್ನು 2008ರಲ್ಲಿ ಮಹಾರಾಷ್ಟ್ರ ಸರ್ಕಾರದ ಕ್ರೀಡಾ ಪ್ರಭೋದಿನಿ ಕ್ರೀಡಾ ಕಾರ್ಯಕ್ರಮಕ್ಕೆ ಸೇರಿಸಿದೆ. ಸಾಂಗ್ಲಿಯಲ್ಲಿ ಒಂದು ವರ್ಷ ಫಿಟ್‌ನೆಸ್‌ ತರಬೇತಿ ಬಳಿಕ, ಒಂದು ಕ್ರೀಡೆ ಆಯ್ದುಕೊಳ್ಳಬೇಕಿತ್ತು. ಶೂಟಿಂಗ್‌ ಮತ್ತು ಸೈಕ್ಲಿಂಗ್‌ ಎರಡೂ ಆಯ್ಕೆ ಆತನ ಮುಂದಿದ್ದವು. ಆದರೆ, ಶೂಟಿಂಗ್‌ ಆಯ್ದುಕೊಂಡು, 2009ರಿಂದ ನಾಸಿಕ್‌ನಲ್ಲಿ ತರಬೇತಿ ಪಡೆಯಲು ಆರಂಭಿಸಿದ’ ಎಂದು ಸುರೇಶ ಹೇಳಿದರು.

‘2015ರಲ್ಲಿ ಸೆಂಟ್ರಲ್‌ ರೈಲ್ವೆಯಲ್ಲಿ ಕರ್ತವ್ಯಕ್ಕೆ ಸೇರಿದ ಸ್ವಪ್ನಿಲ್‌, ಪುಣೆಯಲ್ಲಿ ತರಬೇತಿ ಮುಂದುವರಿಸಿದ. ಮಹೇಂದ್ರ ಸಿಂಗ್‌ ಧೋನಿ ಸೇರಿ ವಿವಿಧ ಸಾಧಕರ ಜೀವನಗಾಥೆ ಆಧರಿಸಿದ ಸಿನಿಮಾಗಳನ್ನು ಆಗಾಗ ವೀಕ್ಷಿಸುತ್ತಿದ್ದ. ಯಾವ ಟೂರ್ನಿಯಲ್ಲಿ ಭಾಗವಹಿಸಿದರೂ ಪ್ರಶಸ್ತಿ ಬಾಚಿಕೊಂಡೇ ಬರುತ್ತಿದ್ದ. ಈಗ ಆತನ ಸಾಧನೆ 1,200 ಜನಸಂಖ್ಯೆಯ ನಮ್ಮೂರಿಗೆ ಹಿರಿಮೆ ತಂದಿದೆ’ ಎಂದು ಅವರು ಹೇಳಿದರು.

‘ನಾಲ್ಕೈದು ವರ್ಷಗಳ ಹಿಂದೆ ಜಾತ್ರೆಗಾಗಿ ಊರಿಗೆ ಬಂದಿದ್ದ. ಯಾವುದೋ ಟೂರ್ನಿಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪತ್ರಿಕೆಯಲ್ಲಿ ಆತನ ಚಿತ್ರ ಪ್ರಕಟವಾಗಿತ್ತು. ಇಂಥ ಸಣ್ಣಪುಟ್ಟ ಟೂರ್ನಿಯಲ್ಲಿ ಗೆದ್ದಾಗ ಪತ್ರಿಕೆಯಲ್ಲಿ ಚಿತ್ರ ಪ್ರಕಟವಾಗುವುದು ಬೇಡ.‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸುದ್ದಿ, ಚಿತ್ರ ಪ್ರಕಟವಾಗಲಿ ಎಂದಿದ್ದ. ಅದು ಕೂಡ ನೆರವೇರಿದೆ’ ಎಂದರು.

‘ಸ್ವಪ್ನಿಲ್‌ ಎಲ್ಲೇ ಇದ್ದರೂ ಕುಟುಂಬದ ಬಗ್ಗೆ ಅಪಾರ ಕಾಳಜಿ. ಪ್ಯಾರಿಸ್‌ಗೆ ಹೋದ ಬಳಿಕವೂ ನಿರಂತರ ಸಂಪರ್ಕವಿದೆ.  ಗುರುವಾರದ ಪಂದ್ಯದಲ್ಲಿ ಏಕಾಗ್ರತೆಗೆ ಕೊರತೆ ಆಗದಿರಲಿ ಎಂದು ಹಿಂದಿನ ದಿನ ನಾವೇ ಕರೆ ಮಾಡಿರಲಿಲ್ಲ. ಕಂಚಿನ ಪದಕ ಗೆಲ್ಲುತ್ತಿದ್ದಂತೆ, ನಮಗೆ ವಿಡಿಯೊ ಕರೆ ಮಾಡಿ ಖುಷಿಪಟ್ಟ’ ಎಂದು ಹರ್ಷ ಹಂಚಿಕೊಂಡರು.

ಸ್ವಪ್ನಿಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.