ADVERTISEMENT

ಬೆಳಗಾವಿ: ತೆಲಸಂಗ ದ್ರಾಕ್ಷಿ ಸೌದಿ ಅರೇಬಿಯಾಕ್ಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 12:54 IST
Last Updated 4 ಫೆಬ್ರುವರಿ 2022, 12:54 IST
ತೆಲಸಂಗದ ರೈತ ಕಾಶೀಮ ಮುಜಾರ ಅವರು ಬೆಳೆದ ದ್ರಾಕ್ಷಿಯನ್ನು ಅರೇಬಿಯಾಕ್ಕೆ ಕಳುಹಿಸಲು ಪ್ಯಾಕ್ ಮಾಡುತ್ತಿರುವುದು
ತೆಲಸಂಗದ ರೈತ ಕಾಶೀಮ ಮುಜಾರ ಅವರು ಬೆಳೆದ ದ್ರಾಕ್ಷಿಯನ್ನು ಅರೇಬಿಯಾಕ್ಕೆ ಕಳುಹಿಸಲು ಪ್ಯಾಕ್ ಮಾಡುತ್ತಿರುವುದು   

ತೆಲಸಂಗ (ಬೆಳಗಾವಿ ಜಿಲ್ಲೆ): ಹವಾಮಾನ ವೈಪರೀತ್ಯದ ಪರಿಣಾಮ ಈ ಭಾಗದಲ್ಲಿ ಮೂರ್ನಾಲ್ಕು ವರ್ಷದಿಂದ ದ್ರಾಕ್ಷಿ ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಪ್ರಸಕ್ತ ವರ್ಷವೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಂತಹ ವಾತಾವರಣಕ್ಕೆ ಸಡ್ಡು ಹೊಡೆದ ಇಲ್ಲೊಬ್ಬ ರೈತ ಗುಣಮಟ್ಟದ ದ್ರಾಕ್ಷಿ ಬೆಳೆದಿದ್ದು, ಅದು ವಿದೇಶಕ್ಕೆ ರಫ್ತಾಗುತ್ತಿದೆ.

ಗ್ರಾಮದ ಕಾಶೀಮ ಮುಜಾವರ 20 ವರ್ಷಗಳಿಂದ 2 ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಪ್ರಸಕ್ತ ವರ್ಷ ತಾನು ಬೆಳೆದ ದ್ರಾಕ್ಷಿ ಹೊರದೇಶಕ್ಕೆ ರಪ್ತಾಗುತ್ತಿರುವುದಕ್ಕೆ ಅವರ ಮೊಗದಲ್ಲಿ ಸಂತಸ ಮೂಡಿಸಿದೆ.

ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಅವರು ದ್ರಾಕ್ಷಿಯನ್ನು ವ್ಯಾಪಾರಿಗೆ ದ್ರಾಕ್ಷಿ ಮಾರಿದ್ದಾರೆ. ಅದು ಅತ್ಯುತ್ತಮ ಗುಣಮಟ್ಟದ್ದಾದ್ದರಿಂದ ಸೌದಿಅರೆಬಿಯಾಕ್ಕೆ ರಫ್ತು ಮಾಡಲು ಬೇಕಿರುವ ವಿಶೇಷ ಪ್ಯಾಕಿಂಗ್ ವ್ಯವಸ್ಥೆಯನ್ನು ವ್ಯಾಪಾರಿ ಮಾಡಿದ್ದಾರೆ. ಆಗ ತಾನು ಬೆಳೆದ ದ್ರಾಕ್ಷಿ ರಫ್ತಾಗುತ್ತಿದೆ ಎನ್ನುವುದು ಕಾಶಿಮ ಅವರಿಗೆ ಗೊತ್ತಾಗಿದೆ.

ADVERTISEMENT

ಕಾಶೀಮ, ದ್ರಾಕ್ಷಿ ಬೆಳೆಯಲು ಎಕರೆಗೆ ಪ್ರತಿ ವರ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದರು. ಪ್ರಸಕ್ತ ವರ್ಷ ₹ 1.30 ಲಕ್ಷ ವ್ಯಯಿಸಿದ್ದಾರೆ. ಪ್ರತಿ ವರ್ಷ ₹ 5 ಲಕ್ಷದಿಂದ ₹ 6 ಲಕ್ಷ ಆದಾಯ ಬರುತ್ತಿತ್ತು. ಈ ವರ್ಷ ₹7.5 ಲಕ್ಷ ಸಿಕ್ಕಿದೆ. ಬೆಳೆಯನ್ನು ಜಾಗರೂಕತೆಯಿಂದ ನೋಡಿ ಲಾಭ ಗಳಿಸಿದ್ದಾರೆ.

‘ಬೆಳೆ ಮಾಡುವಾಗ ಎಲ್ಲವೂ ಗೊತ್ತಿರುವುದಿಲ್ಲ. ಅನುಭವ ದೊರೆಯುತ್ತಾ ಹೋಗುತ್ತದೆ. ಅನುಭವ ಆದಂತೆಲ್ಲ ಹೊಸ ಬೆಳೆ ಬೆಳೆಯಲು, ಸ್ವಂತವಾಗಿ ನಿರ್ವಹಿಸಲು ಅನುಕೂಲವಾಗುತ್ತದೆ. ರೈತರ ಶ್ರಮಕ್ಕೆ ಪ್ರಕೃತಿಯೂ ಸಾಥ್‌ ಕೊಡಬೇಕಾಗುತ್ತದೆ’ ಎನ್ನುತ್ತಾರೆ ಕಾಶೀಮ.

‘ಅತ್ಯಂತ ಕಷ್ಟದ ದಿನಗಳಲ್ಲಿ ದ್ರಾಕ್ಷಿ ಬೆಳೆ ಮಾಡಿ ಬದುಕು ಕಟ್ಟಿಕೊಂಡ ಕಾಶೀಮ ಈಗ ಅದರಲ್ಲಿಯೇ ಯಶಸ್ಸು ಕಂಡುಕೊಂಡಿದ್ದಾರೆ. ಅಥಣಿ ತಾಲ್ಲೂಕಿನಲ್ಲಿ ಹೆಚ್ಚು ದ್ರಾಕ್ಷಿ ಬೆಳೆದರೂ ರಫ್ತು ಮಾಡುವವರು ಬೆರಳೆಣಿಕೆಯಷ್ಟೆ ಇದ್ದಾರೆ. ರೈತರು ಹೊಸ ತಂತ್ರಜ್ಞಾನ ಬಳಸಿ ಉತ್ತಮ ಇಳುವರಿ ಪಡೆಯುಬಹುದು. ಗುಣಮಟ್ಟದ ಬೆಳೆಗೆ ಬೇಡಿಕೆ ಹೆಚ್ಚಿ ಲಾಭವೂ ಸಿಗುತ್ತದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ರಾಮು ನಿಡೋಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.