ADVERTISEMENT

ಬೆಲ್ಲದ ಬಾಗೇವಾಡಿ: ಮಹಾರಾಷ್ಟ್ರದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಟೆಂಟ್ ಶಾಲೆ

ಪ್ರಜಾವಾಣಿ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 12:53 IST
Last Updated 11 ನವೆಂಬರ್ 2023, 12:53 IST
<div class="paragraphs"><p>ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ತೆರೆದಿರುವ ಟೆಂಟ್‌ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಗುಲಾಬಿ ಹೂವು ನೀಡಿ ಸನ್ಮಾನಿಸಲಾಯಿತು</p></div>

ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ತೆರೆದಿರುವ ಟೆಂಟ್‌ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಗುಲಾಬಿ ಹೂವು ನೀಡಿ ಸನ್ಮಾನಿಸಲಾಯಿತು

   

ಹುಕ್ಕೇರಿ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದಿರುವ ಕಬ್ಬು ಕಡಿಯಲು ಮಹಾರಾಷ್ಟ್ರದಿಂದ ಬಂದಿರುವ ಕಾರ್ಮಿಕರ ಮಕ್ಕಳಿಗೆ, ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ್ ಶುಗರ್ಸ್ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಟೆಂಟ್‌ ಶಾಲೆ ತೆರೆದಿದೆ.

ಇದನ್ನು ಶನಿವಾರ ಉದ್ಘಾಟಿಸಿದ ವಿಶ್ವರಾಜ್ ಶುಗರ್ಸ್ ಪ್ರವರ್ತಕ ಪವನ್ ಕತ್ತಿ, ‘ಶಾಲೆಯಿಂದ ಹೊರಗುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ‘ಟೆಂಟ್ ಶಾಲೆ’ ತೆರೆದಿರುವುದು ಶ್ಲಾಘನೀಯ. ಇಲ್ಲಿ ಅನಾನುಕೂಲವಾದರೆ ವಿ.ಎಂ.ಕತ್ತಿ ಶಿಕ್ಷಣ ಸಂಸ್ಥೆಯಲ್ಲಿ ಟೆಂಟ್‌ ಶಾಲೆ ತೆರೆಯಲು ಜಾಗ ನೀಡಲು ಸಿದ್ಧವಿದ್ದೇನೆ. ಕಾರ್ಮಿಕರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು’ ಎಂದು ಕೋರಿದರು.

ADVERTISEMENT

‘ಪ್ರತಿವರ್ಷ ಕಬ್ಬು ಕಡಿಯಲು ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಿಲ್ಲೆಗೆ ಬರುತ್ತಾರೆ. ತಮ್ಮೊಂದಿಗೆ ಮಕ್ಕಳನ್ನೂ ಕರೆತರುತ್ತಾರೆ. ಡಿಡಿಪಿಐ ನೇತೃತ್ವದಲ್ಲಿ ಸಮಗ್ರ ಮಾಹಿತಿ ಕಲೆಹಾಕಿದರೆ, ಮಕ್ಕಳಿಗೆ ಹೆಚ್ಚಿನ ಶೈಕ್ಷಣಿಕ ಸೌಕರ್ಯ ಒದಗಿಸಬಹುದು’ ಎಂದರು.

ಬಿಇಒ ಪ್ರಭಾವತಿ ಪಾಟೀಲ, ‘ಸಂಘ–ಸಂಸ್ಥೆಗಳ ನೆರವಿನೊಂದಿಗೆ ಮಹಾರಾಷ್ಟ್ರದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಲು ಟೆಂಟ್‌ ಶಾಲೆ ತೆರೆಯಲಾಗಿದೆ. ಈ ಅವರಿಗೆ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ ಒದಗಿಸಲಾಗುವುದು. ತಾತ್ಕಾಲಿಕವಾಗಿ ಬೋಧನೆ ಮಾಡಲು ಮರಾಠಿ ಭಾಷಾ ಶಿಕ್ಷಕರನ್ನು ನಿಯೋಜಿಸಲಾಗುವುದು’ ಎಂದರು.

‘ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ಹಿರಾ ಶುಗರ್ಸ್‌ ಸಕ್ಕರೆ ಕಾರ್ಖಾನೆಗೆ ಬಂದಿರುವ ಮಹಾರಾಷ್ಟ್ರದ ಕಾರ್ಮಿಕರು, ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪದಲ್ಲೇ ವಾಸ್ತವ್ಯ ಹೂಡಿದ್ದಾರೆ. ಅವರ ಮಕ್ಕಳಿಗೆ ಆ ಶಾಲೆಯಲ್ಲೇ ಶಿಕ್ಷಣ ಕೊಡುತ್ತೇವೆ’ ಎಂದು ಹೇಳಿದರು.

ಬಿಆರ್‌ಸಿ ಎ.ಎಸ್.ಪದ್ಮನ್ನವರ, ಮುಖ್ಯಶಿಕ್ಷಕ ಕೆ.ಎ.ರಾಯಕರ, ಎಸ್.ಆರ್.ಖಾನಾಪುರೆ, ಆರ್.ಟಿ.ಮುಜಾವರ ಇತರರಿದ್ದರು. ಕೆ.ಸಿ.ಮುಚಕಂಡಿ ಸ್ವಾಗತಿಸಿದರು. ಪ್ರೀತಮ್‌ ನಿಡಸೋಸಿ ನಿರೂಪಿಸಿದರು. ಸಿಆರ್‌ಪಿ ಜಗದೀಶ ಮಿರಗಿ ವಂದಿಸಿದರು.

ಮಹಾರಾಷ್ಟ್ರದಿಂದ ಬಂದಿರುವ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತವಾಗಿರುವ ಬಗ್ಗೆ ‘ಪ್ರಜಾವಾಣಿ’ ನವೆಂಬರ್‌ 7ರ ಸಂಚಿಕೆಯಲ್ಲಿ ‘ಕಮರಿದ ಮಕ್ಕಳ ಅಕ್ಷರದ ಕನಸು!’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.