ADVERTISEMENT

ಗ್ರಾಮೀಣ ಸೇವೆ ಕಡ್ಡಾಯ: 7,023 ವೈದ್ಯಕೀಯ ಪದವೀಧರರಿಗೆ ಇಕ್ಕಟ್ಟು

ಸಂತೋಷ ಈ.ಚಿನಗುಡಿ
Published 5 ಜನವರಿ 2024, 7:59 IST
Last Updated 5 ಜನವರಿ 2024, 7:59 IST
<div class="paragraphs"><p>ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ</p></div>

ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ

   

ಬೆಳಗಾವಿ: ರಾಜ್ಯ ಸರ್ಕಾರದ ದ್ವಂದ್ವ ನಿಲುವಿನಿಂದ ರಾಜ್ಯದ 7,023 ವೈದ್ಯಕೀಯ ಪದವೀಧರರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಪದವಿ ಮುಗಿದ ಏಳು ತಿಂಗಳ ಬಳಿಕ ‘ಗ್ರಾಮೀಣ ಕಡ್ಡಾಯ ಸೇವೆ’ಗೆ ಆದೇಶ ಹೊರಡಿಸಿದ್ದು, ಗೊಂದಲಕ್ಕೀಡು ಮಾಡಿದೆ.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಡಿಸೆಂಬರ್ 13ರಂದು  ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ (ತಿದ್ದುಪಡಿ) ಮಸೂದೆ –2023’ ಅಂಗೀಕಾರವಾಯಿತು. ಅದರಂತೆ ಎಂಬಿಬಿಎಸ್‌ ಮತ್ತು ಸ್ನಾತಕೋತ್ತರ ಕೋರ್ಸ್‌ ಪೂರ್ಣಗೊಳಿಸಿದ ಅಭ್ಯರ್ಥಿಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಕಡ್ಡಾಯ ಸೇವೆ ಸಲ್ಲಿಸುವ ನಿಯಮ ರದ್ದುಪಡಿಸಲಾಗಿತ್ತು. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಸೂದೆ ಮಂಡಿಸಿದ್ದರು.

ಆದರೆ, ಸರ್ಕಾರ ದಿಢೀರ್‌ನೇ ಸರ್ಕಾರ ‘ಗ್ರಾಮೀಣ ಕಡ್ಡಾಯ ಸೇವೆ’ ನೇಮಕಾತಿಗೆ ಆದೇಶಿಸಿದೆ. ಜನವರಿ 1ರಂದು ಇ–ಕೌನ್ಸೆಲಿಂಗ್‌ ನೋಟಿಸ್‌ ಹೊರಡಿಸಿ, ಮೆರಿಟ್‌ ಪಟ್ಟಿಯನ್ನೂ ಸಿದ್ಧಪಡಿಸಿದೆ.

2017–18ನೇ ಸಾಲಿನಲ್ಲಿ ವೈದ್ಯಕೀಯ ಕೋರ್ಸ್‌ ಪ್ರವೇಶ ಪಡೆದವರು ಪದವಿ ಮುಗಿಸಿ ಏಳು ತಿಂಗಳು ಆಗಿವೆ. ಅವರೆಲ್ಲ ಸ್ನಾತಕೋತ್ತರ ‘ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಪಿಜಿ ನೀಟ್‌)’ ಬರೆಯಲು ಸಿದ್ಧತೆ ನಡೆಸಿದ್ದಾರೆ. ಮಾರ್ಚ್‌ 3ರಂದು ಪಿಜಿ ನೀಟ್‌ ಕೂಡ ನಿಗದಿಯಾಗಿದೆ.

ಈಗ ನೀಟ್‌ಗೆ ಸಿದ್ಧತೆ ಮಾಡಿಕೊಳ್ಳಬೇಕೆ ಅಥವಾ ಗ್ರಾಮೀಣ ಸೇವೆಗೆ ಸೇರಬೇಕೆ ಎಂಬ ಗೊಂದಲದಲ್ಲಿ ಅಭ್ಯರ್ಥಿಗಳು ಇದ್ದಾರೆ. ಸೇವೆಗೆ ಸೇರಿದರೆ ಓದಲು ಸಮಯ ಸಿಗದು ಎಂಬ ಆತಂಕ ಅವರದ್ದು.

ಮೆರಿಟ್‌ ಪಟ್ಟಿಯಲ್ಲೂ ಗೊಂದಲ: ಸರ್ಕಾರಿ ಕೋಟಾದಡಿ ಪದವಿ ಪೂರ್ಣಗೊಳಿಸಿದವರಿಗೆ ಮಾತ್ರ ಗ್ರಾಮೀಣ ಸೇವೆ ಕಡ್ಡಾಯ ಎಂಬ ನಿಯಮವಿದೆ. ಆದರೆ, ಸದ್ಯ ಹೊರಡಿಸಲಾದ ಮೆರಿಟ್‌ ಪಟ್ಟಿಯಲ್ಲಿ ಸರ್ಕಾರಿ ಮತ್ತು ಮ್ಯಾನೇಜ್‌ಮೆಂಟ್‌ ಕೋಟಾದ ಪದವೀಧರರನ್ನೂ ಸೇರಿಸಲಾಗಿದೆ. ಇದು ಅಭ್ಯರ್ಥಿಗಳಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.

‘2017–18ರ ಬ್ಯಾಚ್‌ನ 1,072 ಪದವೀಧರರಿಗೆ ಕಡ್ಡಾಯ ಸೇವೆಯಿಂದ ವಿನಾಯಿತಿ ನೀಡಲಾಗಿದೆ. ಹುದ್ದೆಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇದನ್ನು ಕೂಡ ಮೆರಿಟ್‌ ಆಧಾರದ ಮೇಲೆಯೇ ಪರಿಗಣಿಸಲಾಗಿದೆ’ ಎಂದು ಅಭ್ಯರ್ಥಿಗಳು ಹೇಳುತ್ತಾರೆ.

‘2024ರ ಪಿಜಿ ನೀಟ್‌ ಪರೀಕ್ಷೆ ಮುಗಿಯುವವರೆಗೆ ನಮಗೆ ಅವಕಾಶ ಕೊಟ್ಟು, ಅಲ್ಲಿಯವರೆಗೆ ಗ್ರಾಮೀಣ ಸೇವೆ ಮುಂದೂಡಬೇಕು’ ಎಂಬುದು ಅವರ ಒತ್ತಾಯ.

ಅಪ್ಪಾಸಾಹೇಬ ತುಪ್ಪದ
ಪಿಜಿ ನೀಟ್‌ ಮುಗಿದ ಬಳಿಕ ಗ್ರಾಮೀಣ ಸೇವೆಗೆ ಕಡ್ಡಾಯವಾಗಿ ಸೇರುವೆ ಎಂದು ಮುಚ್ಚಳಿಕೆ ಬರೆಸಿಕೊಂಡು ಪದವೀಧರರಿಗೆ ನೀಟ್ ಪರೀಕ್ಷೆಗೆ ಅವಕಾಶ ನೀಡಬೇಕು
ಅಪ್ಪಾಸಾಹೇಬ ತುಪ್ಪದ ಪಾಲಕ ಬೆಳಗಾವಿ
ನಾನು ಪಿಜಿ ನೀಟ್‌ ಬರೆಯಲು ತಯಾರಿ ಮಾಡಿಕೊಂಡಿದ್ದೇನೆ. ಸರ್ಕಾರದ ನಿಯಮದಿಂದ ಸಂಕಷ್ಟ ಎದುರಾಗಿದೆ. ನಮಗೆ ಕಾಲಾವಕಾಶ ಕೊಡಬೇಕು
ಐಶ್ವರ್ಯ ಗದ್ಯಾಳ ಎಂಬಿಬಿಎಸ್‌ ಪದವೀಧರೆ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.