ADVERTISEMENT

ಹಿರೇಬಾಗೇವಾಡಿ: ಭಾರಿ ಮಳೆಯಿಂದಾಗಿ ಮನೆ ಕುಸಿದು 7 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 20:23 IST
Last Updated 6 ಅಕ್ಟೋಬರ್ 2021, 20:23 IST
ಮೃತರ ಕುಟುಂಬದವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಾಂತ್ವನ ಹೇಳಿದರು
ಮೃತರ ಕುಟುಂಬದವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಾಂತ್ವನ ಹೇಳಿದರು   

ಹಿರೇಬಾಗೇವಾಡಿ (ಬೆಳಗಾವಿ): ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿಯಲ್ಲಿ ಮನೆಯ ಗೋಡೆ ಕುಸಿದು ಇಬ್ಬರು ಬಾಲಕಿಯರು ಸೇರಿದಂತೆ 7 ಮಂದಿ ಸಾವಿಗೀಡಾದ ಘಟನೆ ಬುಧವಾರ ನಡೆದಿದೆ.

ಬುಧವಾರ ಸಂಜೆ ಬಿದ್ದ ಜೋರು ಮಳೆಯಿಂದಾಗಿ ಮನೆಯ ಗೋಡೆ ಕುಸಿದಿದೆ. ಇದರಿಂದಾಗಿ ಅವಶೇಷಗಳಡಿ ಸಿಲುಕಿ ಐವರು ಸಾವಿಗೀಡಾಗಿದ್ದಾರೆ. ಮೂವರ ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಹಿರೇಬಾಗೇವಾಡಿ ಠಾಣೆ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಅರ್ಜುನ ಹನುಮಂತ ಖನಗಾಂವಿ (48), ಪತ್ನಿ ಸತ್ಯವ್ವ ಖನಗಾಂವಿ (45), ಪುತ್ರಿ ಲಕ್ಷ್ಮಿ ಖನಗಾಂವಿ (17), ಪೂಜಾ ಅರ್ಜುನ ಖನಗಾಂವಿ (8), ಗಂಗವ್ವ ಭೀಮಪ್ಪ ಖನಗಾಂವಿ (50), ಸವಿತಾ ಭೀಮಪ್ಪ ಖನಗಾಂವಿ (28) ಮತ್ತು ಕಾಶವ್ವ ವಿಠ್ಠಲ ಕೊಳಪ್ಪನವರ (8) ಮೃತರು. ಐವರು ಸ್ಥಳದಲ್ಲಿ ಹಾಗೂ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಹಳೆಯ ಮನೆಯ ಚಾವಣಿ ತೆಗೆದು ಹೊಸದಾಗಿ ಹಾಕುವ ಸಿದ್ಧತೆಯನ್ನು ಮನೆಯವರು ಮಾಡಿಕೊಂಡಿದ್ದರು. ಪಕ್ಕದಲ್ಲಿ ಹಾಕಿದ್ದ ತಗಡಿನ ಶೆಡ್‌ನಲ್ಲಿ ಇದ್ದರು. ಮಳೆ ಬೀಳುತ್ತಿದ್ದ ವೇಳೆ, ಪಕ್ಕದಲ್ಲಿದ್ದ ಶಿಥಿಲಗೊಂಡಿದ್ದ ಗೋಡೆ ಅವರ ಮೇಲೆ ಕುಸಿದಿದೆ ಎಂದು ತಿಳಿದುಬಂದಿದೆ.

ಮನೆಯ ಯಜಮಾನ ಭೀಮಪ್ಪ‌ ಹಾಗೂ ಅವರ ಪುತ್ರ ಬದುಕುಳಿದಿದ್ದಾರೆ. ಸ್ಥಳಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭೇಟಿ ನೀಡಿದ್ದಾರೆ. ಹಿರೇಬಾಗೇವಾಡಿ ಠಾಣೆ ಪೊಲೀಸರು ಮೃತದೇಹಗಳನ್ನು ಹೊರ‌ ತೆಗೆಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

₹ 10 ಲಕ್ಷ ಪರಿಹಾರಕ್ಕೆ ಆಗ್ರಹ

‘ಬಡಾಲ ಅಂಕಲಗಿ ಗ್ರಾಮದಲ್ಲಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಮೃತರಾದವರ ಕುಟುಂಬದವರಿಗೆ ತಲಾ ₹ 10 ಲಕ್ಷ ಪರಿಹಾರ ನೀಡಬೇಕು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಒತ್ತಾಯಿಸಿದರು.

ಆ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಹೃದಯವಿದ್ರಾವಕ ಘಟನೆ ಇದಾಗಿದೆ. ಒಂದೇ ಕುಟುಂಬದ ಆರು ಮಂದಿ ಹಾಗೂ ಪಕ್ಕದ ಮನೆಯಿಂದ ಓದಿಕೊಳ್ಳಲು ಬಂದಿದ್ದ ಬಾಲಕಿ ಸಾವಿಗೀಡಾಗಿದ್ದಾಳೆ’ ಎಂದು ಭಾವುಕರಾದರು.

‘ನಮ್ಮ ಭಾಗದಲ್ಲಿ ಮನೆಗಳ ಗೋಡೆಗಳನ್ನು ಮಣ್ಣಿನಿಂದ ನಿರ್ಮಿಸಿರುತ್ತಾರೆ. ಹಲವು ದಿನಗಳಿಂದ ಆಗಾಗ ಮಳೆ ಬೀಳುತ್ತಿದೆ. ಇದರಿಂದ ಗೋಡೆ ಶಿಥಿಲಗೊಂಡು ಬಿದ್ದಿದೆ. ಬಡಾಲ ಅಂಕಲಗಿ ಗ್ರಾಮಕ್ಕೆ ಬರಸಿಡಿಲಿನಂತೆ ಈ ಘಟನೆ ನಡೆದಿದೆ. ಅತ್ಯಂತ ದುಃಖ ತಂದಿದೆ. ಸಂಜೆ 7.30ರ ಸುಮಾರಿಗೆ ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ದುರ್ಘಟನೆಯ ಮಾಹಿತಿ ಬಂದ ಕೂಡಲೇ, ಆ ಕಾರ್ಯಕ್ರಮ ಮೊಟಕುಗೊಳಿಸಿ ಇಲ್ಲಿಗೆ ಬಂದೆ. ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಅಂತಿಮ ವಿಧಿವಿಧಾನ ನೆರವೇರಿಸುವವರೆಗೂ ಗ್ರಾಮದಲ್ಲೇ ಇರುತ್ತೇನೆ’ ಎಂದು ತಿಳಿಸಿದರು.

‘ಆ ಕುಟುಂಬದಲ್ಲಿ ತಂದೆ–ಮಗ ಮಾತ್ರ ಉಳಿದಿದ್ದಾರೆ. ಜೀವಗಳನ್ನು ತರಲಾಗುವುದಿಲ್ಲ. ಆದರೆ, ಅವರಿಗೆ ಪರಿಹಾರ ಕೊಡಿಸಲು ಕ್ರಮ ವಹಿಸುವೆ’ ಎಂದರು.

ಭೀಮಪ್ಪ ಜೊತೆ ಮಾತನಾಡಿದ ಸಿ.ಎಂ

ದುರಂತದಲ್ಲಿ ಬದುಕುಳಿದ ಭೀಮಪ್ಪ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೊಬೈಲ್‌ ಫೋನ್‌ನಲ್ಲಿ ಮಾತನಾಡಿ ಸಾಂತ್ವನ ಹೇಳಿದರು.

‘ಸರ್ಕಾರ ನಿನ್ನ ಜೊತೆಗಿರುತ್ತದೆ. ಮೃತರಾದವರ ಅಂತ್ಯಸಂಸ್ಕಾರಕ್ಕೆ ಎಲ್ಲ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ತಕ್ಷಣವೇ ಪರಿಹಾರದ ಹಣವನ್ನು (ತಲಾ ₹5 ಲಕ್ಷ) ತಲುಪಿಸಲಾಗುವುದು. ಯಾವುದೇ ಕಾರಣಕ್ಕೂ ಧೃತಿಗೆಡಬೇಡ’ ಎಂದು ಅಭಯ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.