ADVERTISEMENT

ಚಿಕ್ಕೋಡಿ: ರಸ್ತೆಯೇ ಮೈದಾನ, ಶೌಚಾಲಯವಿಲ್ಲದೇ ಪರದಾಟ

ಇದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ

ಸುಧಾಕರ ಎಸ್.ತಳವಾರ, ಬೆಂಗಳೂರು
Published 7 ಜನವರಿ 2020, 19:45 IST
Last Updated 7 ಜನವರಿ 2020, 19:45 IST
   

ಚಿಕ್ಕೋಡಿ: ಇಲ್ಲಿನ ವೆಂಕಟೇಶ ಗಲ್ಲಿಯಲ್ಲಿರುವ ಕನ್ನಡ ಕಿರಿಯ ‌ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಮೊದಲಾದ ಮೂಲಸೌಕರ್ಯಗಳಿಲ್ಲದೇ ಮಕ್ಕಳು, ಶಿಕ್ಷಕರು ಮತ್ತು ಸಿಬ್ಬಂದಿ ಪರದಾಡುತ್ತಿದ್ದಾರೆ.

ಹಲವು ದಶಕಗಳಿಂದ ಸ್ವಂತ ಕಟ್ಟಡ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಸ್ಥಳೀಯ ವೇಂಕಟೇಶ ಮಂದಿರ ವ್ಯವಸ್ಥಾಪಕ ಸಮಿತಿಗೆ ಸೇರಿದ ಕಟ್ಟಡದ 3 ಕೊಠಡಿಗಳನ್ನು ಬಾಡಿಗೆಗೆ ಪಡೆದು ಶಾಲೆ ನಡೆಸಲಾಗುತ್ತಿದೆ. 1ರಿಂದ 5ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದ್ದು, 32 ಮಕ್ಕಳು ವ್ಯಾಸಂಗ ಮಾಡುತ್ತಾರೆ.

2 ಕೊಠಡಿಯಲ್ಲಿ 5 ತರಗತಿಗಳು ನಡೆಯುತ್ತಿವೆ! ಒಂದನ್ನು ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸಲು ಬಳಕೆ ಮಾಡಲಾಗುತ್ತದೆ. ಇದರಿಂದ ಕೇವಲ 2 ಕೊಠಡಿಗಳಲ್ಲಿ 5 ತರಗತಿಗಳ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲು ಶಿಕ್ಷಕರು ಬಹಳಷ್ಟು ಕಸರತ್ತು ನಡೆಸುತ್ತಿದ್ದಾರೆ. ವಿದ್ಯಾಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಪೋಷಕರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಶೌಚಾಲಯವೇ ಇಲ್ಲ

‘ದೇಶದೆಲ್ಲೆಡೆ ಶೌಚಾಲಯ ನಿರ್ಮಾಣ, ಸ್ವಚ್ಛತೆ ಹಾಗೂ ಸ್ವಚ್ಛತಾ ಅಭಿಯಾನದ ಬಗ್ಗೆ ಅಬ್ಬರದ ಪ್ರಚಾರವನ್ನು ಸರ್ಕಾರ ನಡೆಸುತ್ತಿದೆ. ಆದರೆ, ಈ ಶಾಲೆಯಲ್ಲಿ ಶೌಚಾಲಯವೇ ಇಲ್ಲದೇ ಇರುವುದು ದುರ್ದೈವದ ಸಂಗತಿ. ಇದರಿಂದ ಮಕ್ಕಳು, ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

ಶಾಲೆಯು ಮೂಲ ಸೌಲಭ್ಯದಿಂದ ವಂಚಿತವಾಗಿದೆ. ಮಕ್ಕಳು ಆಟವಾಡಲು ಮೈದಾನವೂ ಇಲ್ಲ. ಶಾಲೆ ಮುಂಭಾಗದಲ್ಲಿ ರಸ್ತೆಯಲ್ಲೇ ಮಕ್ಕಳು ಆಡಬೇಕಾಗಿದೆ. ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ಅಪಘಾತದ ಭೀತಿ ಮಕ್ಕಳನ್ನು ಕಾಡುತ್ತಿದೆ.

‘ಶಾಲೆಯಲ್ಲಿ 32 ಮಕ್ಕಳು ಇದ್ದು, 2 ಕೊಠಡಿಗಳಲ್ಲಿ ಶಿಕ್ಷಣ ನೀಡುವುದು ಕಷ್ಟದ ಕೆಲಸವಾಗಿದೆ. ಶೌಚಾಲಯ, ಮೈದಾನ ಇಲ್ಲದೇ ಅನಾನುಕೂಲವಾಗಿದೆ. ಶಾಲೆಗಾಗಿ ಪ್ರತ್ಯೇಕ ಜಾಗವಿದ್ದರೂ ಕಟ್ಟಡ ನಿರ್ಮಾಣ ಮಾಡುವ ಭಾಗ್ಯ ಕೂಡಿ ಬಂದಿಲ್ಲ. ಈ ಕುರಿತು ಶಿಕ್ಷಣ ಇಲಾಖೆಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಮುಖ್ಯ ಶಿಕ್ಷಕಿ ನಿರ್ಮಲಾ ರೂಗರೂಗಿ ಹೇಳುತ್ತಾರೆ.

2015ರಲ್ಲಿ ಘಾಲೆಗಲ್ಲಿಯ ಹಳೆ ಮರಾಠಿ ಶಾಲೆಯ ಹತ್ತಿರ ಜಾಗ ಮೀಸಲಿಡಲಾಗಿದೆ. ಆದರೆ, ಕಟ್ಟಡ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇನ್ನೂ ಎಷ್ಟು ವರ್ಷ ಬಾಡಿಗೆ ಕೊಠಡಿಯಲ್ಲಿ ಶಾಲೆ ನಡೆಸಬೇಕು ಎನ್ನುವುದು ಪಾಲಕರ ಪ್ರಶ್ನೆಯಾಗಿದೆ.

‘ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಒಳ್ಳೆಯ ಕಟ್ಟಡ, ಶೌಚಾಲಯ ಅಗತ್ಯವಿದೆ. ಕಟ್ಟಡಕ್ಕಾಗಿ ಎಸ್‌ಡಿಎಂಸಿ ಸಭೆಯಲ್ಲಿ ಠರಾವು ಮಾಡಿ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ನೀಡಲಾಗಿದೆ. ಆದರೂ, ಶಿಕ್ಷಣ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳದೇ ಇರುವುದು ಬೇಸರ ತರಿಸಿದೆ’ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಲತಾ ಸುರೇಶ ಬಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯೆಗೆ ಬಿಇಒ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.