ADVERTISEMENT

ಅವಿನಾಶ್‌ ದೇಸಾಯಿಗೆ ಟ್ರ್ಯಾಕ್ಟರ್‌ ಬಹುಮಾನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 4:32 IST
Last Updated 21 ಸೆಪ್ಟೆಂಬರ್ 2025, 4:32 IST
ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ಅವಿನಾಶ್‌ ನಾಗರಾಜ ದೇಸಾಯಿ ಅವರು ‘ಕೃಷಿಯಲ್ಲಿ ತಂತ್ರಜ್ಞಾನ ಬಳಕೆ’ ಕುರಿತ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದು, ಮ್ಯಾಸ್ಸಿ ಫರ್ಗ್ಯುಸನ್ ಟ್ರ್ಯಾಕ್ಟರ್‌ ಅನ್ನು ಬಹುಮಾನವಾಗಿ ನೀಡಲಾಯಿತು
ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ಅವಿನಾಶ್‌ ನಾಗರಾಜ ದೇಸಾಯಿ ಅವರು ‘ಕೃಷಿಯಲ್ಲಿ ತಂತ್ರಜ್ಞಾನ ಬಳಕೆ’ ಕುರಿತ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದು, ಮ್ಯಾಸ್ಸಿ ಫರ್ಗ್ಯುಸನ್ ಟ್ರ್ಯಾಕ್ಟರ್‌ ಅನ್ನು ಬಹುಮಾನವಾಗಿ ನೀಡಲಾಯಿತು   

ಚಚಡಿ: ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ದೇಸಗತಿ ಮನೆತನದ ವಂಶಸ್ಥರಾದ ಅವಿನಾಶ್‌ ನಾಗರಾಜ ದೇಸಾಯಿ ಅವರು ಮಂಡಿಸಿದ ಕ್ರಿಯಾತ್ಮಕ ಚಟುವಟಿಕೆಯು, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ₹8.2 ಲಕ್ಷ ಮೌಲ್ಯದ ಮ್ಯಾಸ್ಸಿ ಫರ್ಗ್ಯುಸನ್ ಟ್ರ್ಯಾಕ್ಟರ್‌ ಅನ್ನು ಅವರಿಗೆ ಬಹುಮಾನವಾಗಿ ನೀಡಲಾಗಿದೆ.

ಎಂಜಿನಿಯರ್‌ ಆಗಿರುವ ಅವಿನಾಶ್‌ ಅವರು ಗ್ರಾಮದಲ್ಲಿಯೇ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಟಿಎಎಫ್‌ಇ ಕಂಪನಿಯು ‘ಕೃಷಿಯಲ್ಲಿ ತಂತ್ರಜ್ಞಾನ ಬಳಕೆ’ ವಿಷಯದ ಕುರಿತು ಆಯೋಜಿಸಿದ್ದ ಸ್ಪರ್ಧೆಯಲ್ಲಿ ತಮ್ಮದೇ ನವೀನ ಯೋಜನೆ ರೂಪಿಸಿ ಸಲ್ಲಿಸಿದ್ದರು. 

ಹೊಸ ತಲೆಮಾರಿನ ಟ್ರ್ಯಾಕ್ಟರ್‌ಗಳನ್ನು ಬಳಸಿ ವಿನೂತನ ಪ್ರಯೋಗ ಮಾಡಿದ್ದು ಅವರ ಸಾಧನೆ. ಕೃಷಿಯಲ್ಲಿ ಟ್ರ್ಯಾಕ್ಟರ್‌ಅನ್ನು ಹೇಗೆಲ್ಲ ಬಳಸಬಹುದು, ಏನೇನು ಪ್ರಯೋಜನ ಪಡೆಯಬಹುದು ಎಂಬ ಬಗ್ಗೆ ಅವರು ತೋರಿಸಿಕೊಟ್ಟ ಪರಿಕಲ್ಪನೆಗೆ ಈ ಬಹುಮಾನ ನೀಡಲಾಗಿದೆ.

ADVERTISEMENT

ವಿದ್ಯಾರ್ಥಿಗಳಿಗೆ ಕೃಷಿ ಅರಿವು: ಕೃಷಿ ಇಲಾಖೆ, ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸರ್ದಾರ್ ವಿ.ಜಿ. ದೇಸಾಯಿ ಪ್ರೌಢಶಾಲೆಯ ಆಶ್ರಯದಲ್ಲಿ ಈಚೆಗೆ ಶಾಲೆ ಮಕ್ಕಳಿಗಾಗಿ ‘ನಮ್ಮ ನಿಮ್ಮೆಲ್ಲರ ಚಿತ್ತ ಕೃಷಿಯತ್ತ’ ಎಂಬ ಅರಿವು ಕಾರ್ಯಕ್ರಮ ಆಯೋಜಿಸಲಾಯಿತು.

ಅವಿನಾಶ್‌ ಅವರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆದ್ದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಯಿತು.

ಜಂಟಿ ಕೃಷಿ ನಿರ್ದೇಶಕ ಎಚ್‌.ಡಿ.ಕೋಳೇಕರ ಕಾರ್ಯಕ್ರಮ ಉದ್ಘಾಟಿಸಿದರು. ದೇಸಗತಿ ಮನೆತನದ ವಂಶಸ್ಥರಾದ ನಾಗರಾಜ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸವದತ್ತಿಯ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ, ಕೆವಿಕೆ ಬೇಸಾಯ ಶಾಸ್ತ್ರಜ್ಞ ಜಿ.ಬಿ.ವಿಶ್ವನಾಥ, ಮುಖಂಡರಾದ ಗುಣಪ್ಪ ದೇಸಾಯಿ ಮುಂತಾದವರು ಅತಿಥಿಗಳಾಗಿ ಪಾಲ್ಗೊಂಡರು.

ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗಾಗಿ ಕೃಷಿ ಆಧರಿತ ರಸಪ್ರಶ್ನೆ ಹಾಗೂ ಚರ್ಚಾ ಸ್ಪರ್ಧೆ ಏರ್ಪಡಿಸಿ, ಎಸ್‌ವಿಜಿಡಿ ಫೌಂಡೇಷನ್‌ ವತಿಯಿಂದ ಬಹುಮಾನ ಕೂಡ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.