ADVERTISEMENT

ಚಿನ್ನಿ ದಾಂಡು,ಗಾಲಿ ಓಟದಲ್ಲಿ ಪಾಲ್ಗೊಂಡು ಬಾಲ್ಯದ ದಿನಗಳನ್ನು ನೆನೆದ ಖಾದರ್‌,ಸವದಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 13:48 IST
Last Updated 11 ಡಿಸೆಂಬರ್ 2025, 13:48 IST
   

ಬೆಳಗಾವಿ: ಇಲ್ಲಿನ ಟಿಳಕವಾಡಿಯ ಲೇಲೇ ಮೈದಾನದಲ್ಲಿ ಶಾಸಕ ಅಭಯ ಪಾಟೀಲ ಗುರುವಾರ ಆಯೋಜಿಸಿದ್ದ 10ನೇ ಆವೃತ್ತಿಯ ಬಾಲ್ಯ ಮತ್ತು ಸಾಂಪ್ರದಾಯಿಕ ಕ್ರೀಡಾಕೂಟದಲ್ಲಿ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್, ಶಾಸಕ ಸಿದ್ದು ಸವದಿ ಭಾಗವಹಿಸಿ, ತಮ್ಮ ಬಾಲ್ಯದ ದಿನ ನೆನಪಿಸಿಕೊಂಡರು.

ಪಾಟೀಲ ಮತ್ತು ಮೇಯರ್ ಮಂಗೇಶ ಪವಾರ್ ಅವರೊಂದಿಗೆ, ಚಿನ್ನಿ–ದಾಂಡು, ಗಾಲಿಯೊಂದಿಗೆ ಓಡುವುದು ಮತ್ತಿತರ ಆಟಗಳನ್ನಾಡಿದರು.

‘ಬಾಲ್ಯದಲ್ಲಿ ನಾವು ಸಾಂಪ್ರದಾಯಿಕ ಮತ್ತು ಜಾನಪದ ಶೈಲಿಯ ಆಟ ಆಡುತ್ತಿದ್ದೆವು. ಅವು ದೈಹಿಕವಾಗಿ ನಮ್ಮನ್ನು ಸದೃಢವಾಗಿ ಇರಿಸುತ್ತಿದ್ದವು. ಅವುಗಳನ್ನು ಗುಂಪುಗಳಲ್ಲಿ ಆಡುವುದರಿಂದ ಜನರೊಂದಿಗಿನ ಬಾಂಧವ್ಯ ಬಲಗೊಳ್ಳುತ್ತಿತ್ತು. ಇಂದು ಮಕ್ಕಳು ಮೊಬೈಲ್‌, ಕಂಪ್ಯೂಟರ್ ಆಟಗಳ ಗೀಳು ಬೆಳೆಸಿಕೊಂಡಿದ್ದಾರೆ. ಇದರಿಂದ ದೈಹಿಕವಾಗಿ ಸದೃಢಗೊಳ್ಳರು. ಹಾಗಾಗಿ ಉಲ್ಲಾಸದಿಂದ ಇರಲು ಸಾಂಪ್ರದಾಯಿಕ ಆಟಗಳನ್ನು ಆಡಬೇಕು’ ಎಂದು ಖಾದರ್ ಹೇಳಿದರು.

ADVERTISEMENT

‘ಜನರು ತಮ್ಮ ಮಕ್ಕಳನ್ನು ಮೈದಾನಕ್ಕೆ ಕರೆತಂದು ಸಾಂಪ್ರದಾಯಿಕ ಆಟಗಳನ್ನು ಆಡಲು ಪ್ರೋತ್ಸಾಹಿಸಬೇಕು’ ಎಂದು ಸವದಿ ಪ್ರತಿಕ್ರಿಯಿಸಿದರು.

‘ಯುವಪೀಳಿಗೆಗೆ ಬಾಲ್ಯ ಮತ್ತು ಸಾಂಪ್ರದಾಯಿಕ ಆಟಗಳ ಬಗ್ಗೆ ತಿಳಿಸಲು ಸತತ 10 ವರ್ಷಗಳಿಂದ ಈ ಕ್ರೀಡಾಕೂಟ ಆಯೋಜಿಸುತ್ತಿದ್ದೇವೆ. ಈ ಆಟಗಳು ನಮ್ಮ ಏಕಾಗ್ರತೆ ಸುಧಾರಿಸಲು ಸಹಾಯ ಮಾಡುತ್ತವೆ’ ಎಂದರು.

ವಿವಿಧ ಕ್ಷೇತ್ರಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.