ADVERTISEMENT

ಬೆಳಗಾವಿ: ಸಾಂಬ್ರಾದಲ್ಲಿ ಸಂಚಾರ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 18 ಮೇ 2024, 15:58 IST
Last Updated 18 ಮೇ 2024, 15:58 IST
ಬೆಳಗಾವಿ ತಾಲ್ಲೂಕಿನ ಸಾಂಬ್ರಾದಲ್ಲಿ ಶನಿವಾರ ಸಂಚಾರ ಸಮಸ್ಯೆ ಉಂಟಾಗಿರುವುದು
ಬೆಳಗಾವಿ ತಾಲ್ಲೂಕಿನ ಸಾಂಬ್ರಾದಲ್ಲಿ ಶನಿವಾರ ಸಂಚಾರ ಸಮಸ್ಯೆ ಉಂಟಾಗಿರುವುದು   

ಬೆಳಗಾವಿ: ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆಯುತ್ತಿರುವ ಮಹಾಲಕ್ಷ್ಮಿ ದೇವಿ ಜಾತ್ರೆಗೆ ಶನಿವಾರ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ್ದರಿಂದ ರಾಯಚೂರು–ಬಾಚಿ ರಾಜ್ಯ ಹೆದ್ದಾರಿಯಲ್ಲಿ ಎರಡು ತಾಸಿಗೂ ಅಧಿಕ ಸಂಚಾರ ಸಮಸ್ಯೆ ಉಂಟಾಗಿತ್ತು.
ಹೆದ್ದಾರಿಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಈ ಮಾರ್ಗದ ಬಸ್‌ಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಮತ್ತು ಬೈಕ್‌ ಸವಾರರು ಪರದಾಡಿದರು. ನ್ಯಾಯಾಧೀಶರೊಬ್ಬರ ಎಸ್ಕಾರ್ಟ್‌ ವಾಹನವೂ ಕೆಲಹೊತ್ತು ಇದರಲ್ಲೇ ಸಿಲುಕಿಕೊಂಡಿತು.

ಸಾಂಬ್ರಾ ವಿಮಾನ ನಿಲ್ದಾಣದಿಂದ ವಿವಿಧ ಮಹಾನಗರಗಳಿಗೆ ತೆರಳುವವರು ತೊಂದರೆ ಅನುಭವಿಸಿದರು. ಟ್ರಾಫಿಕ್‌ ಸಮಸ್ಯೆಯಿಂದಾಗಿ ಕೆಲವು ವಿಮಾನ ತಡವಾಗಿ ಕಾರ್ಯಾಚರಣೆ ನಡೆಸಿದವು.

‘ಜಾತ್ರೆಗೆ ಬರುವ ಭಕ್ತರ ವಾಹನಗಳ ನಿಲುಗಡೆಗಾಗಿ ದೇವಸ್ಥಾನ ಸಮಿತಿಯವರು ವ್ಯವಸ್ಥೆ ಮಾಡಬೇಕಿತ್ತು. ಅವರ ನಿರ್ಲಕ್ಷ್ಯದಿಂದ ಸಂಚಾರ ಸಮಸ್ಯೆ ತಲೆದೋರಿದೆ’ ಎಂದು ಸವಾರರು ಆರೋಪಿಸಿದರು. ಪರಿಸ್ಥಿತಿ ನಿಯಂತ್ರಿಸಲು ಸಂಚಾರ ಪೊಲೀಸರು ಹರಸಾಹಸಪಟ್ಟರು.

ADVERTISEMENT

‍ಪರ್ಯಾಯ ಮಾರ್ಗ ಬಳಸಲು ಮನವಿ: ‘ಮಹಾಲಕ್ಷ್ಮಿ ದೇವಿ ಜಾತ್ರೆ ಪ್ರಯುಕ್ತ, ಸಾಂಬ್ರಾದಲ್ಲಿ ಜನದಟ್ಟಣೆ ಹೆಚ್ಚಿದೆ. ಹಾಗಾಗಿ ಮೇ 19ರಿಂದ 21ರವರೆಗೆ ಸುಗಮ ಸಂಚಾರಕ್ಕಾಗಿ ಜನರು ಪರ್ಯಾಯ ಮಾರ್ಗ ಬಳಸಿ ಸಂಚರಿಸಬೇಕು. ಬೆಳಗಾವಿಯಿಂದ ಸಾಂಬ್ರಾ ವಿಮಾನ ನಿಲ್ದಾಣ ಹಾಗೂ ಬಾಗಲಕೋಟೆಗೆ ಹೋಗುವವರು ಕಣಬರ್ಗಿ, ಖನಗಾವಿ ಕ್ರಾಸ್, ಸುಳೇಬಾವಿ, ಮಾರಿಹಾಳ ಮಾರ್ಗವಾಗಿ ಸಾಗಬೇಕು. ವಿಮಾನ ನಿಲ್ದಾಣ ಮತ್ತು ಬಾಗಲಕೋಟೆಯಿಂದ ಬೆಳಗಾವಿ ನಗರಕ್ಕೆ ಬರುವವರು ಇದೇ ಮಾರ್ಗದಲ್ಲಿ ಸಂಚರಿಸಬೇಕು’ ಎಂದು ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದ್ದಾರೆ.

ಬೆಳಗಾವಿ ತಾಲ್ಲೂಕಿನ ಸಾಂಬ್ರಾದಲ್ಲಿ ಶನಿವಾರ ಸಂಚಾರ ಸಮಸ್ಯೆ ಉಂಟಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.