ADVERTISEMENT

ರಾಮದುರ್ಗ: ‘ಕ್ರಾಸ್‌ ಕಂಟ್ರಿ’ ಓಟದಲ್ಲಿ ಸಾವಿತ್ರಿ ಮಿಂಚು

ವಿಶ್ವವಿದ್ಯಾಲಯ ಬ್ಲೂ ಆಗಿ ಆಯ್ಕೆ

ಚನ್ನಪ್ಪ ಮಾದರ
Published 1 ಅಕ್ಟೋಬರ್ 2019, 19:30 IST
Last Updated 1 ಅಕ್ಟೋಬರ್ 2019, 19:30 IST
ಪ್ರಶಸ್ತಿಯೊಂದಿಗೆ ಸಾವಿತ್ರಿ ಬೀರಸಿದ್ದಿ
ಪ್ರಶಸ್ತಿಯೊಂದಿಗೆ ಸಾವಿತ್ರಿ ಬೀರಸಿದ್ದಿ   

ರಾಮದುರ್ಗ: ಕುಟುಂಬದಲ್ಲಿ ಕಡು ಬಡತನವಿದ್ದರೂ ಸ್ನೇಹಿತರ ಪ್ರೀತಿಯಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ಇಲ್ಲಿನ ಈರಮ್ಮ ಯಾದವಾಡ ಪ್ರಥಮ ದರ್ಜೆ ಕಾಲೇಜಿನ ಕ್ರಾಸ್‌ಕಂಟ್ರಿ (ಗುಡ್ಡಗಾಡು) ಓಟದ ಪಟು ಸಾವಿತ್ರಿ ವೆಂಕಪ್ಪ ಬೀರಸಿದ್ದಿ ವಿಶ್ವವಿದ್ಯಾಯಲಯದ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. ಹಲವು ಗಮನಾರ್ಹ ಸಾಧನೆ ಮಾಡಿದ್ದಾರೆ.

ಅಂತಿಮ ವರ್ಷದ ಪದವಿ ಓದುತ್ತಿರುವ ಸಾವಿತ್ರಿ ಸ್ನೇಹಿತರ ಸಹಕಾರ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರ ಮಾರ್ಗದರ್ಶನದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬ್ಲೂ ಆಗಿ ಹೊರಹೊಮ್ಮಿದ್ದಾರೆ. ಸತತ 2ನೇ ಬಾರಿಗೆ ಈ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.

ತಾಲ್ಲೂಕಿನ ಘಟಕನೂರಿನ ಅವರ ತಂದೆ– ತಾಯಿ ಕೃಷಿಯನ್ನೇ ಅವಲಂಬಿಸಿದವರು. ಮೂವರು ಸೋದರಿಯರೊಂದಿಗೆ ಬೆಳೆದ ಸಾವಿತ್ರಿ ತನ್ನ ಎಲ್ಲ ಪ್ರಯತ್ನವನ್ನು ಉಪಯೋಗಿಸಿ ಸಾಧನೆಯ ಹೆಜ್ಜೆ ಇಡುತ್ತಿದ್ದಾರೆ. ರಸ್ತೆಯಲ್ಲಿಯೇ ಓಡುವ ಅಭ್ಯಾಸ ಮಾಡುತ್ತಾರೆ.

ADVERTISEMENT

ಒಂದು ಹಂತದಲ್ಲಿ ಕುಟುಂಬದವರ ವಿರೋಧದ ಹಿನ್ನೆಲೆಯಲ್ಲಿ ಓಡುವ ಅಭ್ಯಾಸ ಮಾಡುವುದನ್ನು, ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದರು. ಗ್ರಾಮೀಣ ಭಾಗದಲ್ಲಿಯೇ ಕ್ರಾಸ್‌ಕಂಟ್ರಿ ಓಟದಲ್ಲಿ ಆಸಕ್ತಿ ಹೊಂದಿದ್ದ ಅವರು ಸ್ನೇಹಿತರ ಒತ್ತಾಯದ ಮೇರೆಗೆ ಮತ್ತೆ ಓಡಲು ಶುರು ಮಾಡಿದರು. ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರವೇಶ ಪಡೆದ ನಂತರ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಕೆ. ಸಾರವಾನ್‌ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ದೂರದ 10 ಕಿ.ಮೀ. ದೂರವನ್ನು 45.15 ನಿಮಿಷಗಳಲ್ಲಿ ಗುರಿ ತಲುಪಿ ಕ್ರಾಸ್‌ಕಂಟ್ರಿ ಓಟದ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಬಹುಮಾನ ಪಡೆದಿದ್ದಾರೆ. ‘ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ಮುಂದಿನ ದಿನಗಳಲ್ಲಿ ರೈಲ್ವೆ ಇಲ್ಲವೇ ಪೊಲೀಸ್‌ ಇಲಾಖೆಯಲ್ಲಿ ಕೆಲಸಕ್ಕೆ ಸೇರಬೇಕು ಎನ್ನುವ ಆಸೆ ಇದೆ’ ಎನ್ನುತ್ತಾರೆ ಅವರು.

‘ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡೆಗಳಿಗೆ ವಿಶೇಷ ತರಬೇತಿಗಳೇನೂ ಇಲ್ಲ. ಆದರೂ ದೈಹಿಕ ಶಿಕ್ಷಣ ನಿರ್ದೇಶಕರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದ ಸಾವಿತ್ರಿ, ಕಾಲೇಜಿನ ಕೀರ್ತಿಯನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ’ ಎಂದು ಪ್ರಾಚಾರ್ಯ ಡಾ.ಎ.ಎಸ್‌. ಲಾಳಸಂಗಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.