ADVERTISEMENT

ಬೆಳಗಾವಿ: ‘ಉನ್ನತಿ’ ಕೌಶಲ ತರಬೇತಿಗೆ ನಿರಾಸಕ್ತಿ

ಕೇಂದ್ರದ ಯೋಜನೆ ಅನುಷ್ಠಾನಕ್ಕೆ ಗಮನಹರಿಸದ ಜಿಲ್ಲಾ ಪಂಚಾಯ್ತಿ

ಎಂ.ಮಹೇಶ
Published 24 ಏಪ್ರಿಲ್ 2021, 19:30 IST
Last Updated 24 ಏಪ್ರಿಲ್ 2021, 19:30 IST
ಬೆಳಗಾವಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವುದು (ಸಾಂಕೇತಿಕ ಚಿತ್ರ)
ಬೆಳಗಾವಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವುದು (ಸಾಂಕೇತಿಕ ಚಿತ್ರ)   

ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ 100 ಮಾನವ ದಿನಗಳನ್ನು ಪೂರೈಸಿದ ಕುಟುಂಬದ ಒಬ್ಬ ವಯಸ್ಕ ಸದಸ್ಯರಿಗೆ ಕೌಶಲ ತರಬೇತಿ ನೀಡುವ ‘ಉನ್ನತಿ’ ಕಾರ್ಯಕ್ರಮ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ನಿರಾಸಕ್ತಿ ಕಂಡುಬಂದಿದೆ.

ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಜಿಲ್ಲಾ ಪಂಚಾಯ್ತಿ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮ, ಕೂಲಿಕಾರರ ಕುಟುಂಬದ ಸದಸ್ಯರೊಬ್ಬರು ಸರ್ಕಾರದಿಂದ ಉಚಿತವಾಗಿ ತರಬೇತಿ ಪಡೆದು ಸ್ವಯಂ ಉದ್ಯೋಗ ಕಂಡುಕೊಂಡು ಸ್ವಾವಲಂಬಿ ಆಗಲೆಂಬ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಉದ್ದೇಶಕ್ಕೆ ಹಿನ್ನಡೆಯಾಗಿದೆ.

2019ರಲ್ಲೇ ಜಾರಿಯಾದ ಯೋಜನೆಯು ಬಾಲಗ್ರಹ ಪೀಡಿತವಾಗಿದೆ.

ADVERTISEMENT

ಅನುಷ್ಠಾನಕ್ಕೆ ಸೂಚಿಸಲಾಗಿದೆ: ಯೋಜನೆಯಲ್ಲಿ ಉದ್ಯೋಗ ಚೀಟಿ ಹೊಂದಿರುವ 18ರಿಂದ 45 ವರ್ಷದ ಒಬ್ಬರಿಗೆ ಜೀವನೋಪಾಯ ರೂಪಿಸಲು ಸಹಕಾರಿ ಆಗುವಂತೆ ಕೌಶಲ ತರಬೇತಿ ನೀಡಬೇಕು ಎಂದು ಸೂಚಿಸಲಾಗಿದೆ. ಉದ್ಯೋಗ ಖಾತ್ರಿ, ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ (ಎಸ್ಆರ್‌ಎಲ್‌ಎಂ), ಕೃಷಿ ಇಲಾಖೆಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆ (ಆರ್‌ಎಸ್‌ಇಟಿಐಎಸ್) ಒಗ್ಗೂಡಿಸುವಿಕೆ ಮೂಲಕ ಅನುಷ್ಠಾನಕ್ಕೆ ತರುವಂತೆ ಆದೇಶಿಸಲಾಗಿತ್ತು. ತರಬೇತಿಗೆ ಯುವಕ–ಯುವತಿಯರನ್ನು ಆಯ್ಕೆ ಮಾಡುವುದಕ್ಕಾಗಿ ತಾಲ್ಲೂಕು, ಜಿಲ್ಲಾ ರಾಜ್ಯ ಮಟ್ಟದ ಸಮಿತಿಗಳನ್ನು ಕೂಡ ರಚಿಸಲಾಗಿತ್ತು. ತಾಲ್ಲೂಕು ಮಟ್ಟದ ಸಮಿತಿಗಳಿಗ ತಾಲ್ಲೂಕು ಪಂಚಾಯ್ತಿ ಇಒಗಳನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ, ತರಬೇತಿ ಕಾರ್ಯಕ್ರಮ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ.

ಅವಕಾಶ ಬಳಸಿಕೊಳ್ಳಲಿಲ್ಲ: ಕೋವಿಡ್ ಮೊದಲನೇ ಅಲೆಯಿಂದಾಗಿ ಜಾರಿಗೊಳಿಸಲಾದ ಲಾಕ್‌ಡೌನ್‌ ಸಂದರ್ಭದಲ್ಲಿ ನಗರಗಳಿಂದ ಹಳ್ಳಿಗಳಿಗೆ ವಾಪಸಾದ ಸಾವಿರಾರು ಮಂದಿಗೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಯಿತು. ಹೀಗೆ ಉದ್ಯೋಗ ಪಡೆದವರಲ್ಲಿ ಯುವಕರ ಸಂಖ್ಯೆ ಜಾಸ್ತಿ ಇತ್ತು. ಅಲ್ಲದೇ, ಪದವೀಧರರು ಕೂಡ ಇದ್ದಾರೆ. ಬಹಳಷ್ಟು ಕುಟುಂಬಗಳು ನೂರು ಮಾನವ ದಿನಗಳನ್ನು ಪೂರೈಸಿವೆ. ಅವುಗಳಲ್ಲಿ ಯುವಕ ಅಥವಾ ಯುವತಿಯರಿಗೆ ಕೌಶಲ ತರಬೇತಿಯನ್ನು ಸಮರ್ಪಕವಾಗಿ ನೀಡಿದ್ದರೆ, ಜೀವನೋಪಾಯ ರೂಪಿಸಿಕೊಳ್ಳುವುದಕ್ಕೆ ಸಹಕಾರಿ ಆಗುತ್ತಿತ್ತು. ಕೂಲಿ ಮಾಡುವುದರಿಂದ ಅವರನ್ನು ಹೊರತರುವುದಕ್ಕೆ ಅವಕಾಶವಿತ್ತು. ಇದನ್ನು ಬಳಸಿಕೊಳ್ಳುವ ಕಾಳಜಿಯನ್ನು ಅಧಿಕಾರಿಗಳು ತೋರಿಲ್ಲ.

ಜಿಲ್ಲೆಯಲ್ಲಿ 6.52 ಲಕ್ಷ ಮಂದಿ ಉದ್ಯೋಗ ಚೀಟಿ ಪಡೆದಿದ್ದಾರೆ. ಈ ಪೈಕಿ 3.49 ಲಕ್ಷ ಚೀಟಿಗಳು ಸಕ್ರಿಯವಾಗಿವೆ. ಈ ಅಕುಶಲ ಕಾರ್ಮಿಕರಿಗೆ ಕೌಶಲ ತರಬೇತಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವಲ್ಲೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ವಿಫಲವಾಗಿದ್ದಾರೆ. ಅಲ್ಲದೇ, ತರಬೇತಿಯನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲು ಮುಂದಾಗಿರುವುದು ಕೂಡ ಕೂಲಿಕಾರರಿಗೆ ತೊಡಕಾಗಿ ಪರಿಣಮಿಸಿದೆ. ಪಂಚಾಯ್ತಿ ಮಟ್ಟದಲ್ಲೇ ತರಬೇತಿಗೆ ಕ್ರಮವಾಗಿಲ್ಲದಿರುವುದು ಕಂಡುಬಂದಿದೆ.

ಕೆಲವರಷ್ಟೆ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾರ್ಯಕ್ರಮದ ಸಂಯೋಜಕ ಎಂ.ಆರ್. ಮರಿಗೌಡರ, ‘ಹೋದ ವರ್ಷ ಒಂದು ತಂಡಕ್ಕೆ ತರಬೇತಿಗೆ ಯೋಜಿಸಿದ್ದೆವು. 12 ಮಂದಿ ಮಾತ್ರ ಬಂದಿದ್ದರು. ಬಳಿಕ ಕೋವಿಡ್ ಮೊದಲಾದ ಕಾರಣಗಳಿಂದ ತರಬೇತಿ ನಡೆದಿಲ್ಲ. ಯೋಜನೆಯ ಲಾಭದ ಬಗ್ಗೆ ಮನವರಿಕೆ ಮಾಡಿಕೊಡುವಂತೆ ಪಂಚಾಯ್ತಿಗಳಿಗೆ ತಿಳಿಸಿದ್ದೇವೆ. ಮುಂದಿನ ಬ್ಯಾಚ್‌ ಆರಂಭಿಸಲು ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಪ್ರತಿ ಬ್ಯಾಚ್‌ನಲ್ಲಿ 30 ಮಂದಿಗೆ ಅವಕಾಶ ಕಲ್ಪಿಸಬಹುದು. ಆದರೆ, ಆ ಕುಟುಂಬಗಳಿಂದ ಪ್ರತಿಕ್ರಿಯೆ ಸಿಗುತ್ತಿಲ್ಲ. ಹೈನುಗಾರಿಕೆ, ಆಡು ಸಾಕಣೆ, ಕಂಪ್ಯೂಟರ್, ಪಂಪ್‌ಸೆಟ್ ದುರಸ್ತಿ... ಅಭ್ಯರ್ಥಿಗಳ ಆಸಕ್ತಿ ಆಧರಿಸಿ ತರಬೇತಿ ನೀಡುವ ಯೋಜನೆ ಇದಾಗಿದೆ. ಬೆಳಗಾವಿಯಲ್ಲಿ ಉಚಿತ ಊಟ–ವಸತಿ ಸೌಲಭ್ಯದೊಂದಿಗೆ ಒದಗಿಸಲಾಗುವುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.