
ಹಂದಿಗುಂದ: ‘12ನೇ ಶತಮಾನದಲ್ಲಿ ಸಮಾಜವು ಜಾತಿ ಭೇದ, ವರ್ಣ ವ್ಯವಸ್ಥೆ, ಬ್ರಾಹ್ಮಣ್ಯ ಏಕ ಚಕ್ರಾಧಿಪತ್ಯ ಮತ್ತು ಮಹಿಳೆಯರ ದಮನದಿಂದ ಬಳಲುತ್ತಿತ್ತು. ಧರ್ಮವು ಸಾಮಾನ್ಯ ಜನರಿಗೆ ಭಯ ಮತ್ತು ಬಂಧನದ ಸಾಧನವಾಗಿತ್ತು. ಅಂದಿನ ವಚನಕಾರ್ತಿಯರು ಸಮಾನತೆ, ಸ್ವಾತಂತ್ರ್ಯಕ್ಕೆ ಕ್ರಾಂತಿಗಿಳಿದರು’ ಎಂದು ಕದಳಿ ಸಮ್ಮೇಳನದ ಸರ್ವಾಧ್ಯಕ್ಷೆ, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.
ಹಂದಿಗುಂದದ ಹಾನಗಲ್ಲ ಕುಮಾರೇಶ್ವರ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ತೃತೀಯ ಕದಳಿ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
‘ಶರಣೆಯರಾದ ಅಕ್ಕಮಹಾದೇವಿ, ನೀಲಮ್ಮ, ಗೊಗ್ಗವ್ವೆ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ ಅವರೂ ವಚನಾಕರರಷ್ಟೇ ಸಮಾನರಾಗಿ ಬರೆದರು. ಮಹಿಳೆಯರು ತಮ್ಮ ಬದುಕಿನಿಂದಲೇ ತತ್ವ ಕಟ್ಟುತ್ತಾರೆ. ಧರ್ಮ ಮತ್ತು ಸಮಾಜದಲ್ಲಿ ಹೆಣ್ಣು ಗಂಡು ಭೇದವಿಲ್ಲದೆ ಮನೆ ಮತ್ತು ಹೊರಗಿನ ಎರಡು ಕೆಲಸಗಳನ್ನು ಮಾಡುತ್ತ ಧಾರ್ಮಿಕ ಸಾಮಾಜಿಕ ಆರ್ಥಿಕ ಮೌಲ್ಯಗಳನ್ನು ನಿರ್ವಹಿಸುತ್ತಾಳೆ’ ಎಂದರು.
ನಿಡಸೋಶಿ ಸಿದ್ಧ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಮಾತನಾಡಿ, 'ದೇಶದಲ್ಲಿ ಮಹಿಳೆಯರು ಪೈಲೆಟ್, ಗಗನಯಾನಿ, ರೈಲ್ವೆ ಚಾಲಕಿಯಾಗಿ ಸಾಧನೆ ಮಾಡಿದ್ದಾರೆ’ ಎಂದರು.
ಕೂಡಲಸಂಗಮ ಬಸವ ಧರ್ಮ ಪೀಠದ ಗಂಗಾ ಮಾತಾಜಿ ಮಾತನಾಡಿದರು. ಇದಕ್ಕೂ ಮುನ್ನ ಅಕ್ಕಮಹಾದೇವಿಯವರ ಭಾವಚಿತ್ರ, ಪ್ರೊ.ವಿಜಯ ಕೋರಿಶೆಟ್ಟಿ, ಕದಳಿ ಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ.ಶಾಲಿನಿತಾಯಿ ದೊಡ್ಡಮನಿ ಅವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.
ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಸುರೇಖಾ ಚಂದ್ರಶೇಖರ ಗುಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಚಂದ್ರಶೇಖರ ಗುಡಿಸಿ ಬಸವ ಭಾವ ಪೂಜೆ ನೆರವೇರಿಸಿದರು. ಬಸವರಾಜ ಬಡಿಗೇರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಐ.ಆರ್. ಮಠಪತಿ ನಾಡಧ್ವಜ, ಅಶೋಕ ಮಳಗಲಿ, ಪರಿಷತ್ ಧ್ವಜ ರೋಹನ ನೆರವೇರಿಸಿದರು. ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ ಅವರ ‘ವಚನ ಸಮಚ್ಚಯ’ ಗ್ರಂಥವನ್ನು ಚಂದ್ರಶೇಖರ ಗಣಾಚಾರಿ ಬಿಡುಗಡೆಗೊಳಿಸಿದರು.
ಉಗಾರ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶಾಲನಿ ತಾಯಿ ದೊಡ್ಡಮನಿ ಅವರಿಗೆ ಕದಳಿ ಶ್ರೀ ಪ್ರಶಸ್ತಿ ನೀಡಿ ಸತ್ಕರಿಸಿದರು. ನಿಕಟಪೂರ್ವ ಸರ್ವಾಧ್ಯಕ್ಷೆ ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು.
ನಂತರ ಚಿಂತನಾ ಗೋಷ್ಠಿಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.