ADVERTISEMENT

ವಚನಗಳು ಮನೆಗಳಿಗೆ ತಲುಪಲಿ: ಶಾಸಕ ಅನಿಲ ಬೆನಕೆ ಆಶಯ

ಸಿದ್ಧರಾಮೇಶ್ವರ ಜಯಂತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 15:45 IST
Last Updated 15 ಜನವರಿ 2021, 15:45 IST
ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಶಾಸಕ ಅನಿಲ ಬೆನಕೆ ಉದ್ಘಾಟಿಸಿದರು
ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಶಾಸಕ ಅನಿಲ ಬೆನಕೆ ಉದ್ಘಾಟಿಸಿದರು   

ಬೆಳಗಾವಿ: ‘ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪ ಕಟ್ಟಿದ ಬಸವಣ್ಣವರ ವಚಗಳನ್ನು ಮನೆ ಮನೆಗೆ ತಲುಪಿಸುವ ಶ್ರೇಷ್ಠ ಕಾಯಕವನ್ನು ಶಿವಯೋಗಿ ಸಿದ್ದರಾಮೇಶ್ವರ ಅವರು ಮಾಡಿದರು. ಅದನ್ನು ಮುಂದುವರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಸವಣ್ಣನವರು ಸಮಾನತೆಯನ್ನು ಬಿತ್ತುವ ಕಾಯಕವನ್ನು ಮೊದಲು ಮಾಡಿದವರು. ಅವರ ವಚನಗಳನ್ನು ಪ್ರತಿ ಮನೆ ಮನೆಗೂ ತಲುಪಿಸಿ ಅರಿವು ಮೂಡಿಸಿದ ಸಿದ್ಧರಾಮೇಶ್ವರರ ನಿಸ್ವಾರ್ಥ ಸೇವೆ ಸ್ಮರಣೀಯ’ ಎಂದರು.

ADVERTISEMENT

‘ಬದಲಾವಣೆ ಹೊಂದಬೇಕಾದರೆ ಸಮಾನತೆಯ ಪಾತ್ರ ಬಹಳ ಮಹತ್ವದ್ದು. ವಚನಗಳ ಅರಿವು ಪಡೆದು ಮತ್ತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಸಮಾಜದಲ್ಲಿ ಬಿತ್ತರಿಸಬೇಕು’ ಎಂದು ಸಲಹೆ ನೀಡಿದರು.

ಡಾ.ಮೈತ್ರೇಯಣಿ ಗದಿಗೆಪ್ಪಗೌಡರ ಉಪನ್ಯಾಸ ನೀಡಿದರು. ಬಸವರಾಜ ತಿಮ್ಮಾಪೂರ ಮತ್ತು ಕಲಾವಿದರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಭೋವಿ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಮಮದಾಪೂರ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಸರ್ವಮಂಗಳಾ ಅರಳಿಮಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.