ADVERTISEMENT

ಕೆಂಪು ಕೋಟೆಗೆ ರೈತರ ಲಗ್ಗೆ: ತನಿಖೆಯಾಗಲಿ– ಸಚಿವ ರಮೇಶ ಜಾರಕಿಹೊಳಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 11:31 IST
Last Updated 27 ಜನವರಿ 2021, 11:31 IST
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ    

ಬೆಳಗಾವಿ: ‘ದೆಹಲಿಯಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಲವರು ಕೆಂಪುಕೋಟೆಗೆ ನುಗ್ಗಿ ಧ್ವಜ ಹಾರಿಸಿದ್ದಾರೆ. ಈ ಘಟನೆಯ ಹಿಂದೆ ಹಲವರ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ. ಸಂಘರ್ಷದಲ್ಲಿ ಪಾಲ್ಗೊಂಡವರು ನಿಜವಾದ ರೈತರೇ, ಅಲ್ಲವೇ ಎನ್ನುವ ಬಗ್ಗೆ ತನಿಖೆಯಾಗಬೇಕು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಬುಧವಾರ ಒತ್ತಾಯಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದೆಹಲಿಯಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ನಡೆದಿರುವ ಘಟನೆ ದುರದೃಷ್ಟಕರ. ಇದರಿಂದಾಗಿ ಭಾರತದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ಶುರುವಾಗಿದೆ. ಇಂತಹ ಘಟನೆಗಳಿಗೆ ಶತ್ರು ದೇಶಗಳ ಕುಮ್ಮಕ್ಕು ಇರುವ ಸಾಧ್ಯತೆಯೂ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ’ ಎಂದರು.

‘ಸುಪ್ರೀಂ ಕೋರ್ಟ್ ಕೂಡ ರೈತರೊಂದಿಗೆ ಚರ್ಚೆಗೆ ಸೂಚಿಸಿದೆ. ಕಾಯ್ದೆಗಳ ಬಗ್ಗೆ ಅನುಮಾನಗಳಿದ್ದರೆ ಬಗೆಹರಿಸಲು ಸಮಿತಿ ರಚಿಸಲಾಗಿದೆ. ಆದರೆ, ರೈತರು ಚರ್ಚೆಗೆ ಸಿದ್ಧವಿಲ್ಲ; ಅಭಿಪ್ರಾಯಗಳನ್ನೂ ತಿಳಿಸುತ್ತಿಲ್ಲ. ಸುಮ್ಮನೆ ವಿರೋಧಿಸಿದರೆ ಹೇಗೆ? ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.