ADVERTISEMENT

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 15:44 IST
Last Updated 27 ಫೆಬ್ರುವರಿ 2026, 15:44 IST
<div class="paragraphs"><p>ಲೈಂಗಿಕ ದೌರ್ಜನ್ಯ </p></div>

ಲೈಂಗಿಕ ದೌರ್ಜನ್ಯ

   

–‍ಪ್ರಾತಿನಿಧಿಕ ಚಿತ್ರ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ ಮಾಡಿದ್ದಾರೆ, ಲಂಚಕ್ಕೆ ಪೀಡಿಸಿದ್ದಾರೆ ಎಂದು ಆರೋಪಿಸಿ ಮಹಿಳಾ ವಸತಿ ನಿಲಯದ ವಾರ್ಡನ್‌ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

‘2024ರ ಆಗಸ್ಟ್‌ 13ರಂದು ನಾನು ಹೊರಗುತ್ತಿಗೆ ಆಧಾರದ ಮೇಲೆ ಮಹಿಳಾ ವಸತಿ ನಿಲಯದಲ್ಲಿ ವಾರ್ಡನ್ ಆಗಿ ಸೇವೆಗೆ ಸೇರಿದೆ. ಇಲಾಖೆಯ ಸಹಾಯಕ ನಿರ್ದೇಶಕ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಲಿಂದ ಮೇಲೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ತಮಗೆ ಬೇಕಾದಾಗ ತಮ್ಮ ಕೊಠಡಿಗೆ ಬರಬೇಕು ಎಂದು ಕೇಳುತ್ತಿದ್ದರು. ಸಹಕರಿಸದ ಕಾರಣ ಕಿರುಕುಳ ಶುರು ಮಾಡಿದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ವಸತಿ ನಿಲಯದ ಆದಾಯದಿಂದ ಪ್ರತಿ ತಿಂಗಳು ₹10 ಸಾವಿರ ಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಮಾತು ಕೇಳದಿದ್ದರೆ ಕಚೇರಿಯಲ್ಲಿ ಹೆಚ್ಚು ಹೊತ್ತು ಉಳಿಸುತ್ತಿದ್ದರು. ತಮ್ಮ ಖಾಸಗಿ ವಾಹನದಲ್ಲಿ ಗೋವಾಗೆ ಹೋಗಿ ಬರೋಣ, ಎಂಜಾಯ್ ಮಾಡೋಣ ಎಂದು ಪದೇಪದೇ ಪೀಡಿಸಿದ್ದಾರೆ. ಅಲ್ಲದೇ, ಮದ್ಯದ ನಶೆಯಲ್ಲಿ ರಾತ್ರಿ ಯಾವಾಗಬೇಕೋ ಆಗ ವಿಡಿಯೊ ಕಾಲ್‌ ಮಾಡಿ ತೊಂದರೆ ನೀಡಿದ್ದಾರೆ’ ಎಂದೂ ಆರೋಪಿಸಿದ್ದಾರೆ.

‘ನನ್ನ ಗಂಡನ ಬಗ್ಗೆ ಇಲ್ಲಸಲ್ಲದ ತ‍ಪ್ಪು ಮಾಹಿತಿಗಳನ್ನು ನನಗೆ ನೀಡಿದರು. ಅವನು ನನಗೆ ಸರಿಯಲ್ಲ ಎಂದು ಹೇಳಿ ವಿರಸ ಮೂಡಿಸಿದರು. ಅವರು ಹೇಳಿದ ಮಾತು ಕೇಳದೇ ಇದ್ದಾಗ ನನಗೆ ಜನಾಂಗೀಯ ನಿಂದಣೆ ಮಾಡಿದರು. ನಾವು ಮಾಂಸಾಹಾರ ಸೇವನೆ ಮಾಡುತ್ತೇವೆ ಎಂದು ಭಾವಿಸಿ ಅವರ ಕಚೇರಿಯೊಳಗೆ ಬಿಟ್ಟುಕೊಳ್ಳದೇ ದೂರದಲ್ಲೇ ಇರುವಂತೆ ಶಿಕ್ಷೆ ಕೊಡುತ್ತಿದ್ದರು. ಅವರಿಂದ ಭಯ ಉಂಟಾಗಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದೇನೆ’ ಎಂದೂ ಮಹಿಳೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.