
ಚಿಕ್ಕೋಡಿ: ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಬಹುತೇಕ ಕಚೇರಿ ಹೊಂದಿದ ಚಿಕ್ಕೋಡಿ ಪಟ್ಟಣ ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿದೆ. ಕಳೆದ ಐದು ದಶಕಗಳಿಂದ ಇಲ್ಲಿ ಪುರಸಭೆ ಕಚೇರಿಯೂ ಇದೆ. ಆದರೆ, ನಗರಸಭೆಯಾಗಿ ಮೇಲ್ದರ್ಜೆಗೇರುವ ಭಾಗ್ಯ ಇನ್ನೂ ದೊರೆತಿಲ್ಲ.
ಜಿಲ್ಲೆಯ ಕೆಲವು ಪಟ್ಟಣ ಪಂಚಾಯಿತಿಗಳು ಪುರಸಭೆಗಳಾಗಿ ಮತ್ತು ಪುರಸಭೆಗಳು ನಗರಸಭೆಗಳಾಗಿ ಈಚೆಗೆ ಮೇಲ್ದರ್ಜೆಗೇರಿವೆ. ಆದರೆ, ಚಿಕ್ಕೋಡಿ ಪುರಸಭೆ ಮೇಲ್ದರ್ಜೆಗೇರಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಸ್ಥಳೀಯರು ಹೆಚ್ಚಿನ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
1973ರಲ್ಲಿ ಸ್ಥಾಪನೆಯಾದ ಚಿಕ್ಕೋಡಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. ಸುತ್ತಲಿನ ಮೂರ್ನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿ ಪಟ್ಟಣ ಬೆಳೆದುನಿಂತಿದೆ. ಇನ್ನೂ ಬೆಳೆಯುತ್ತಲೇ ಇದೆ. ಹಾಗಾಗಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿದರೆ, ಪಟ್ಟಣಕ್ಕೆ ಹೆಚ್ಚಿನ ಅನುದಾನ ಹರಿದುಬರಲಿದೆ. ಆದರೆ, ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಕೇವಲ ಪುರಸಭೆಯಿಂದ ಚಿಕ್ಕೋಡಿಯಲ್ಲಿನ ಉಪವಿಭಾಗ ಮತ್ತು ಜಿಲ್ಲಾಮಟ್ಟದ ಕಚೇರಿಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ.
ಇಲ್ಲಿನ ಆದರ್ಶ ನಗರ(ದಕ್ಷಿಣ) ಬಡಾವಣೆಯಲ್ಲಿ 11 ಗುಂಟೆ ಜಾಗದಲ್ಲಿ ₹2.50 ಕೋಟಿ ವೆಚ್ಚದಲ್ಲಿ ಎರಡು ಅಂತಸ್ತಿನ ಪುರಸಭೆಯ ಕಟ್ಟಡ ನಿರ್ಮಾಣವಾಗಿ, ಎಂಟು ವರ್ಷ ಕಳೆದಿದೆ. ಚಿಕ್ಕೋಡಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದರೆ, ಈ ಕಟ್ಟಡವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬಹುದು.
‘ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದಾಗಿ, ಚಿಕ್ಕೋಡಿ ತಾಲ್ಲೂಕಿನ ಅಂಕಲಿ, ಹಿರೇಕೋಡಿ, ಖಡಕಲಾಟ ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿವೆ. ಅದೇ ತೆರನಾಗಿ ಚಿಕ್ಕೋಡಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಬೇಕು’ ಎಂಬುದು ಜನರ ಆಗ್ರಹ.
ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯ ಮೂರು ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಅಂತೆಯೇ ಚಿಕ್ಕೋಡಿ ಪುರಸಭೆಯನ್ನು ನಗರಸಭೆಯಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆಗಣೇಶ ಹುಕ್ಕೇರಿ ಶಾಸಕ
ಚಿಕ್ಕೋಡಿಯಲ್ಲಿ ಜಿಲ್ಲೆ ಮತ್ತು ಉಪವಿಭಾಗ ಮಟ್ಟದ ಕಚೇರಿಗಳಿವೆ. ತುರ್ತಾಗಿ ಚಿಕ್ಕೋಡಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದೆಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಮಾಜಿ ಸದಸ್ಯ
ಚಿಕ್ಕೋಡಿ ಪುರಸಭೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಶಾಸಕರು ಮಾಹಿತಿ ಕೇಳಿದ್ದಾರೆ. ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆಸುಭಾಷ ಸಂಪಗಾವಿ ಉಪವಿಭಾಗಾಧಿಕಾರಿ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.