ADVERTISEMENT

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ: ಸರ್ಕಾರದ ನಡೆ ನೋಡಿ ಪ್ರತಿಕ್ರಿಯೆ– ಡಿಕೆಶಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 12:21 IST
Last Updated 21 ಡಿಸೆಂಬರ್ 2022, 12:21 IST
   

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರವಾಗಿ ಸರ್ಕಾರ ಯಾವ ನಿಲುವು ತಾಳುತ್ತದೆ ನೋಡಿಕೊಂಡು ನಾವು ಪ್ರತಿಕ್ರಿಯಿಸುತ್ತೇವೆ. ನಮ್ಮನ್ನಂತೂ ಯಾರೂ ಸಂಪರ್ಕ ಮಾಡಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

‘ಹಲವು ಸಮಾಜಗಳು ಮೀಸಲಾತಿಗೆ ಹೋರಾಟ ನಡೆಸಿವೆ. ಅದಕ್ಕೆ ಕಾನೂನು ಅಡಚಣೆಗಳೇನು ಎಂಬುದು ಗೊತ್ತಿಲ್ಲ. ಈ ವಿಚಾರವಾಗಿ ಆಡಳಿತ ಪಕ್ಷ ತೀರ್ಮಾನ ಮಾಡಬೇಕು. ಕಾನೂನು ಏನಿದೆ ಎಂದು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು’ ಎಂದು ಅವರು ನಗರದಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

‘ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳದ ವಿಚಾರವಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ ಶೇ 50 ಮಿತಿ ಮೀರಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯಲ್ಲಿ ಸಚಿವರು ಉತ್ತರ ನೀಡಿದ್ದಾರೆ. ಹೀಗೆ ಮೀಸಲಾತಿ ವಿಚಾರ ಗೊಂದಲದ ಗೂಡಾಗಿದೆ. ಹೀಗಾಗಿ, ಕಾನೂನು ಅಂಶಗಳನ್ನು ಅರಿಯಲು ಎಐಸಿಸಿಯಿಂದ ಒಂದು ಸಮಿತಿ ಮಾಡಲಾಗಿದೆ. ನಾವೆಲ್ಲ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ’ ಎಂದರು.

ADVERTISEMENT

‘ಸರ್ಕಾರ ತರಾತುರಿಯಲ್ಲಿ ಮೀಸಲಾತಿ ಹೆಚ್ಚಳ ಮಸೂದೆ ಮಂಡನೆ ಮಾಡುತ್ತಿದೆ. ಅವರಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿ ತಿದ್ದುಪಡಿ ತರಲಿ. ಅದನ್ನು ಮಾಡದೇ ಇಲ್ಲಿ ಏನೇ ಮಾಡಿದರೂ ಪ್ರಯೋಜನವಿಲ್ಲ’ ಎಂದೂ ಅವರು ಹೇಳಿದರು.

‘ಇಲ್ಲಿ ಕಾನೂನು ತರುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹೇಗಿದ್ದರೂ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಕಾನೂನನ್ನು ಅಲ್ಲಿಗೆ ಕಳುಹಿಸಿ, ಅನುಮೋದನೆ ಪಡೆಯಲಿ. ಆತುರದಲ್ಲಿ ನಾವು ಮಾಡಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಈ ಮೀಸಲಾತಿ ಹೆಚ್ಚಳ ವಿಚಾರವಾಗಿ ನಾಗಮೋಹನ ದಾಸ್ ಸಮಿತಿಯನ್ನು ರಚನೆ ಮಾಡಿದವರೇ ನಾವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.