ADVERTISEMENT

ಮಾದರಿ ಪಾಲಿಕೆಯಾಗಿ ರೂಪಿಸಲು ಪ್ರಯತ್ನ: ಶಾಸಕ ಅಭಯ ಪಾಟೀಲ

ಶಾಸಕ ಅಭಯ ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 15:11 IST
Last Updated 12 ಸೆಪ್ಟೆಂಬರ್ 2021, 15:11 IST
ಬೆಳಗಾವಿಯ ಮಿಲೇನಿಯಂ ಉದ್ಯಾನದಲ್ಲಿ ಭಾನುವಾರ ನಡೆದ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಪಾಲಿಕೆ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಸಂಸದೆ ಮಂಗಲಾ ಸಂಗಡಿ ಪಾಲ್ಗೊಂಡಿದ್ದಾರೆಪ್ರಜಾವಾಣಿ ಚಿತ್ರ
ಬೆಳಗಾವಿಯ ಮಿಲೇನಿಯಂ ಉದ್ಯಾನದಲ್ಲಿ ಭಾನುವಾರ ನಡೆದ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಪಾಲಿಕೆ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಸಂಸದೆ ಮಂಗಲಾ ಸಂಗಡಿ ಪಾಲ್ಗೊಂಡಿದ್ದಾರೆಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಬೆಳಗಾವಿ ಮಹಾನಗರ ಪಾಲಿಕೆಯನ್ನು ದೇಶದಲ್ಲೇ ಮಾದರಿಯಾಗಿ ರೂಪಿಸಲು ಪ್ರಯತ್ನಿಸಲಾಗುವುದು. ನಗರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿಶೇಷ ಅನುದಾನ ತರಲಾಗುವುದು’ ಎಂದು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಭರವಸೆ ನೀಡಿದರು.

ಇಲ್ಲಿನ ತಿಲಕವಾಡಿಯ ಮಿಲೇನಿಯಂ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಾಲಿಕೆ ನೂತನ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಘ–ಸಂಸ್ಥೆಗಳ ಸಲಹೆ ಆಧರಿಸಿ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು. ಸಮರ್ಪಕ ಕಸ ವಿಲೇವಾರಿ, ನೀರಿನ ಬವಣೆ ನೀಗಿಸುವುದು, ತೆರಿಗೆ ಸಂಗ್ರಹ, ವಾಹನಗಳ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು’ ಎಂದರು.

ADVERTISEMENT

‘ದೇಶದಲ್ಲೇ ಮಾದರಿ ಪಾಲಿಕೆಗಳಾಗಿರುವ ಇಂದೋರ್, ಸೂರತ್, ನಾಗಪುರಕ್ಕೆ ಸ್ವಂತ ಖರ್ಚಿನಲ್ಲೇ ಪಾಲಿಕೆ ಸದಸ್ಯರನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲಾಗುವುದು. ಕಾರ್ಯವೈಖರಿ ಬಗ್ಗೆ ಮನದಟ್ಟು ಮಾಡಲು ಪಕ್ಷಾತೀತವಾಗಿ ಎಲ್ಲ ಸದಸ್ಯರಿಗೂ ಎರಡು ದಿನಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ನಗರಪಾಲಿಕೆಗೆ ಹೊಸದಾಗಿ ಚುನಾಯಿತರಾದವರು ಬೆಳಗಾವಿಗರ ಆಸ್ತಿ. ಜಾತಿ, ಭಾಷೆ ಬದಿಗೊತ್ತಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಬೆಳಗಾವಿಗರ ಕನಸು ನನಸಾಗಿಸಬೇಕು. ಅವರ ಅಪೇಕ್ಷೆಯಂತೆ ಆಡಳಿತ ನಡೆಸಬೇಕು. ಪ್ರತಿ 4 ತಿಂಗಳಿಗೊಮ್ಮೆ ಪ್ರಮುಖರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಬೇಕು. ವಾರ್ಡ್‍ನಾದ್ಯಂತ 15 ದಿನಗಳಿಗೊಮ್ಮೆ ಸಂಚರಿಸಬೇಕು. ಎರಡು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಸಂಸದೆ ಮಂಗಲಾ ಸುರೇಶ ಅಂಗಡಿ, ‘ಸದಸ್ಯರು ಸ್ವಚ್ಛ-ಸುಂದರ ನಗರ ನಿರ್ಮಾಣಕ್ಕಾಗಿ ದುಡಿಯಬೇಕು’ ಎಂದರು.

ಬೆಳಗಾವಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಸಿ. ಪಾಟೀಲ, ಪತ್ರಕರ್ತ ಮೆಹಬೂಬ್ ಮಕಾನದಾರ ಹಲವು ಸಲಹೆಗಳನ್ನು ನೀಡಿದರು.

ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಮನೆ-ಮನೆಯಿಂದ ಒಣ ಹಾಗೂ ಕಸ ಕಸವನ್ನು ಪ್ರತ್ಯೇಕ ವಾಹನದಲ್ಲೇ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ನಗರದ ಹಸಿರೀಕರಣ ಹಾಗೂ ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಬೀದಿಬದಿ ಮಳಿಗೆಗಳಲ್ಲಿ ದೊರೆಯುವ ಆಹಾರದ ಗುಣಮಟ್ಟ ಪರೀಕ್ಷಿಸಲು ವಿಶೇಷ ತಂಡ ರಚಿಸಬೇಕು ಎಂಬ ಒತ್ತಾಯಗಳು ನೆರೆದಿದ್ದವರಿಂದ ಕೇಳಿಬಂದವು.

ಶಾಸಕ ಅನಿಲ ಬೆನಕೆ, ಪಾಲಿಕೆ ಸದಸ್ಯರಾದ ಮಂಗೇಶ ಪವಾರ, ವಾಣಿ ಜೋಶಿ ಮಾತನಾಡಿದರು.

ಸಲಹೆಗಳೇನು?

ಶೌಚಾಲಯ ನಿರ್ಮಿಸಿ

ನಗರದಲ್ಲಿ ಜನಸಂದಣಿ ಕಂಡುಬರುವ ಸ್ಥಳಗಳಲ್ಲಿ ಸುಲಭ್ ಶೌಚಾಲಯ ನಿರ್ಮಿಸಬೇಕು. ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು.

– ಪಂಚಾಕ್ಷರಿ ಚೊನ್ನದ, ಅಧ್ಯಕ್ಷ, ಬೆಳಗಾವಿ ವಾಣಿಜ್ಯೋದ್ಯಮ ಸಂಘ

ಅನುಕೂಲ ಆಗುವಂತಿರಲಿ

ಕೆಲವು ಬಡಾವಣೆಗಳಲ್ಲಿ ನಸುಕಿನ 3ಕ್ಕೆ ಕುಡಿಯುವ ನೀರು ಪೂರೈಸಲಾಗುತ್ತದೆ. ಇದರ ಬದಲಿಗೆ ಜನರಿಗೆ ಅನುಕೂಲವಾಗುವ ಸಮಯದಲ್ಲಿ ಸರಬರಾಜು ಮಾಡಬೇಕು. ಪ್ರತಿ ಸದಸ್ಯರೂ ತಮ್ಮ ವಾರ್ಡ್‍ನ ವ್ಯಾಪ್ತಿ ಅರಿತು, ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು.

–ಸುನೀಲ ನಾಯ್ಕ, ಅಧ್ಯಕ್ಷ, ಖಡೇಬಜಾರ್ ವ್ಯಾಪಾರಿಗಳ ಸಂಘ

ಅಭಿವೃದ್ಧಿಗೆ ವೇಗ ನೀಡಿ

ಪಾಲಿಕೆಗೆ ಬರುವ ಆದಾಯ ಹೆಚ್ಚಿಸಿಕೊಂಡು, ನಗರದ ಅಭಿವೃದ್ಧಿಗೆ ವೇಗ ನೀಡಬೇಕು. ರಸ್ತೆಯಲ್ಲಿ ಕಸ ಎಸೆಯುವವರಿಗೆ ಹೆಚ್ಚಿನ ದಂಡ ವಿಧಿಸಬೇಕು. ನಗರದ ಕೆಲವೆಡೆ ಲ್ಯಾಪ್‍ಟಾಪ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಅಳವಡಿಸಬೇಕು.

– ರೋಹನ ಜುವಳಿ, ಅಧ್ಯಕ್ಷ, ಸಣ್ಣ ಕೈಗಾರಿಕೆಗಳ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.