ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ಮಾಡಲಾದ ಘಟನೆ ಕುರಿತು ಸವದತ್ತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಗದಗಿನ ಸವಿತಾ ಮಂಜುನಾಥ ಅಂಗಡಿ, ಸವದತ್ತಿ ತಾಲ್ಲೂಕು ಹಿರೇಕುಂಬಿಯ ರಾಜಶೇಖರ ಸಿದ್ದರಾಮಪ್ಪ ತೆಂಗಿನಕಾಯಿ, ಮಹಾದೇವಿ ಈರಪ್ಪ ಸಣ್ಣಕ್ಕಿ, ಹರ್ಲಾಪುದ ಯಲ್ಲಪ್ಪಗೌಡ ಪಾಟೀಲ ಸೇರಿ 15 ಜನರ (ಹೆಸರು ತಿಳಿಯದ) ವಿರುದ್ಧ ದೂರು ದಾಖಲಾಗಿದೆ.
ಆರೋಪಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023 ಸಹ ಕಲಂ 115(2), 189(2) 190, 191(2) 351 (2) ಮತ್ತು 352, 76 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
‘ನನ್ನ ಪತಿ ನಿಧನರಾದ ಬಳಿಕ 4 ಎಕರೆ 35 ಗುಂಟೆ ಜಮೀನನ್ನು ಹಿರಿಯರು ನನಗೆ ಉಪಜೀವನಕ್ಕೆ ನೀಡಿದ್ದಾರೆ. ಇದು ತಮಗೆ ಸೇರಿದ್ದು ಎಂದು ನಾದಿನಿ ಸವಿತಾ ದಾವೆ ಹೂಡಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದೆ. ಈ ವರ್ಷ ನಾನು ಕಡಲೆ ಬೆಳೆದಿದ್ದೇನೆ. ಫೆಬ್ರುವರಿ 20ರಂದು ಏಕಾಏಕಿ ಹೊಲಕ್ಕೆ ಬಂದ 15 ಜನ ನಾನು ಬೆಳೆದ ಕಡಲೆ ಫಸಲನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಹೋಗಲು ಯತ್ನಿಸಿದರು. ಇದಕ್ಕೆ ತಡೆಯೊಡ್ಡಿದಾಗ ನನ್ನ ಮೇಲೆ, ನನ್ನ ತಾಯಿ ಹಾಗೂ ಸಹೋದರನ ಮೇಲೂ ಹಲ್ಲೆ ಮಾಡಿದರು. ನನ್ನ ಬಟ್ಟೆ ಹರಿದು ಮಾನಭಂಗಕ್ಕೆ ಯತ್ನಿಸಿದರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ಮಂಗಳವಾರ ಲಿಖಿತ ದೂರು ನೀಡಿದ್ದಾರೆ. ಪೊಲೀಸರೇ ದೂರು ಸ್ವೀಕರಿಸಿಲ್ಲ ಎಂದು ಈ ಹಿಂದೆ ಮಹಿಳೆ ಆರೋಪಿಸಿದ್ದರು. ‘ಆಸ್ಪತ್ರೆಯಲ್ಲಿ ದಾಖಲಾಗಿದ್ದಕ್ಕೆ ತಡವಾಗಿ ದೂರು ನೀಡಿದ್ದೇನೆ’ ಎಂದು ಈಗ ದೂರಿನಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.