ಹುಕ್ಕೇರಿ (ಬೆಳಗಾವಿ ಜಿಲ್ಲೆ): ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೇರೆಬೇರೆ ಕೋಮುಗಳಿಗೆ ಸೇರಿದ ಮಹಿಳೆಯರ ಎರಡು ಗುಂಪುಗಳ ಮಧ್ಯೆ ತೀವ್ರ ಮಾರಾಮಾರಿ ನಡೆದಿದೆ. ಇದರ ವಿಡಿಯೊ ತುಣುಕುಗಳು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಬಸ್ ಹತ್ತಲು ನಿಲ್ದಾಣದಲ್ಲಿ ಬಂದಿದ್ದ ಮೂವರು ಹಿಂದೂ ಹಾಗೂ ಮೂವರು ಮುಸ್ಲಿಂ ಮಹಿಳೆಯರು ಏಕಾಏಕಿ ಹೊಡೆದಾಡಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಕೆನ್ನೆಗೆ, ಬೆನ್ನಿಗೆ ಹೊಡೆದಿದ್ದಾರೆ. ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಬೀಳಿಸಿದ್ದಾರೆ. ಈ ಘಟನೆಯನ್ನು ನಿಲ್ದಾಣದಲ್ಲಿದ್ದ ಜನ ಸುಮ್ಮನೇ ನಿಂತು ನೋಡಿದ್ದಾರೆ. ಪಾಪ್‌ಕಾರ್ನ್ ಮಾರಾಟ ಮಾಡುತ್ತಿದ್ದ ಯುವಕ ಮಧ್ಯ ಪ್ರವೇಶ ಮಾಡಿ ಎರಡೂ ಕಡೆಯ ಮಹಿಳೆಯರ ಜಗಳ ಬಿಡಿಸಿದ್ದಾನೆ.
ಸ್ಥಳದಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಇದನ್ನು ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ. ಬಸ್ಸಿನಲ್ಲಿ ಸೀಟ್ ಹಿಡಿಯುವ ಸಲುವಾಗಿ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ಜಗಳದ ಸಂಬಂಧ ಯಾರಿಂದಲೂ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.