ಸವದತ್ತಿ: ಏಳುಕೊಳ್ಳ– ಏಳು ಗುಡ್ಡಗಳ ನಾಡು ಯಲ್ಲಮ್ಮನ ಗುಡ್ಡ ಬುಧವಾರ ಭಂಡಾರಮಯವಾಗಿ ಕಂಗೊಳಿಸಿತು. ಪ್ರತಿ ವರ್ಷದಂತೆ ಈ ಬಾರಿ ಕೂಡ ಭರತ ಹುಣ್ಣಿಮೆ ಅಂಗವಾಗಿ ಲಕ್ಷಾಂತರ ಜನರಿಂದ ಭಕ್ತಿಯ ಹೊಳೆ ಹರಿಯಿತು.
ಭಂಡಾರ ಹಾರಿಸುತ್ತೇನೆ ಎಂದು ಹರಕೆ ಹೊತ್ತವರೆಲ್ಲ ದೇವಸ್ಥಾನದ ಮೇಲೆ, ಸುತ್ತಲಿನ ಆವರಣದಲ್ಲಿ ಭಂಡಾರ ಎರಚಿ ಹರಕೆ ತೀರಿಸಿದರು. ಜೋಗತಿಯರು, ಜೋಗಪ್ಪಗಳು ಭಂಡಾರದಲ್ಲೇ ಮಿಂದೆದ್ದರು. ಗುಡ್ಡದ ಹೆಜ್ಜೆಹೆಜ್ಜೆಗೂ ಭಂಡಾರವೇ ಕಾಣಿಸಿತು. ಹಲಗೆ ನಾದಕ್ಕೆ, ಮದ್ದಳೆ ಹಾಗೂ ಚೌಡಕಿ ನಾದಕ್ಕೆ ಯುವಜನರು ಕುಣಿದು ಕುಪ್ಪಳಿಸಿದರು. ಉಧೋ ಉಧೋ ಉಧೋ... ಯಲ್ಲಮ್ಮ ನಿನ್ನಹಾಲ್‌ಖುದೋ... ಎಂಬ ಘೋಷಣೆಗಳು ನಿರಂತರ ಮೊಳಗಿದವು. ದೇವಿ ಮೂರ್ತಿ ಇರುವ ಜಗವನ್ನು ಹೊತ್ತು ಮಹಿಳೆಯರು ನೃತ್ಯ ಮಾಡುತ್ತ ಸಾಗಿದರು.
ಈ ಬಾರಿ ಪೊಲೀಸ್ ಇಲಾಖೆಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿದ್ದರೂ ಸಂಚಾರ ದಟ್ಟಣೆ ತಪ್ಪಲಿಲ್ಲ. ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿದ ವಾಹನಗಳನ್ನು ಪೊಲೀಸರು ತೆರವು ಮಾಡಿದರು. ಕಿಲೋಮೀಟರ್ ದೂರದಲ್ಲೇ ವಾಹನ ನಿಲ್ಲಿಸಿದ ಭಕ್ತರು ನಡೆದುಕೊಂಡು ಹೋದರು.
ದಿನವಿಡೀ ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಬಿಡಾರ ಹೂಡಿದ ಜನ ನಸುಕಿನ 3ರಿಂದಲೇ ದರ್ಶನಕ್ಕಾಗಿ ಕಾದು ನಿಂತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.