ADVERTISEMENT

ಯುವಕನನ್ನು ಅಪಹರಿಸಿ ಕರೆಂಟ್ ಶಾಕ್‌: ಕ್ರಮಕ್ಕೆ ಶಾಸಕರ ಆಗ್ರಹ

ಮಾಳಮಾರುತಿ ಠಾಣೆಯಲ್ಲಿ 6 ಮಂದಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 11:30 IST
Last Updated 25 ಜೂನ್ 2019, 11:30 IST

ಬೆಳಗಾವಿ: ಯುವತಿಯನ್ನು ಪ್ರೀತಿಸಿದ ಕಾರಣಕ್ಕಾಗಿ ಯುವಕನನ್ನು ಅಪಹರಿಸಿದ ಕೆಲವರು ಗಂಭೀರವಾಗಿ ಹಲ್ಲೆ ನಡೆಸಿ, ಕರೆಂಟ್‌ ಶಾಕ್‌ ಕೊಟ್ಟು ಹಿಂಸಿಸಿರುವ ಬಗ್ಗೆ ಇಲ್ಲಿನ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಸದ್ಯ ಇಲ್ಲಿನ ಗಾಂಧಿನಗರದ ನಿವಾಸಿ, ಮೂಲತಃ ಧಾರವಾಡ ಜಿಲ್ಲೆಯ ಗರಗ ಗ್ರಾಮದ ಮಡಿವಾಳ ಅಶೋಕ ರಾಯಬಾಗಕರ್‌ (26) ಹಲ್ಲೆಗೆ ಒಳಗಾದ ಯುವಕ.

ದೂರು ಆಧರಿಸಿ, ಗರಗದ ಅಪ್ಪಾಸಾಬ ನದಾಫ್‌, ಉಳವಯ್ಯ ಚಿಕ್ಕಮಠ, ಉದ್ದಪ್ಪ ಉಳವಣ್ಣವರ, ಸಿದ್ದಯ್ಯ ಚಿಕ್ಕೊಪ್ಪ, ಮಡಿವಾಳ ಕಾಳೆ ಹಾಗೂ ಗುಲಾಬ್‌ ಪೀರ್‌ಜಾದೆ ಎನ್ನುವವರ ವಿರುದ್ಧ ದೂರು ದಾಖಲಾಗಿದೆ.

ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಡಿವಾಳ ರಾಯಬಾಗಕರ್‌ ಅವರನ್ನು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಮತ್ತು ಇಲ್ಲಿನ ಉತ್ತರ ಕ್ಷೇತ್ರದ ಶಾಸಕ, ಬಿಜೆಪಿಯ ಅನಿಲ್‌ ಬೆನಕೆ ಸೋಮವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶ್‌ಕುಮಾರ ಅವರನ್ನು ಯುವಕನ ಪೋಷಕರೊಂದಿಗೆ ಭೇಟಿಯಾಗಿ, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

‘ಹಲ್ಲೆ ನಡೆಸಿದವರು ಧಾರವಾಡದ ಕಾಂಗ್ರೆಸ್‌ ಮುಖಂಡ ವಿನಯ ಕುಲಕರ್ಣಿ ಬೆಂಬಲಿಗರಾಗಿದ್ದಾರೆ. ಹೀಗಾಗಿ, ಆರೋಪಿಗಳನ್ನು ಪೊಲೀಸರು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಆಯುಕ್ತರು ಮಧ್ಯಪ್ರವೇಶಿಸಬೇಕು. ಯುವಕರ ತಂದೆ–ತಾಯಿಗೆ ಜೀವ ಬೆದರಿಕೆ ಇದ್ದು, ಅವರಿಗೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಗರಗದಲ್ಲಿ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದ ಮಡಿವಾಳ, ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದರು. ಏಳು ತಿಂಗಳ ಹಿಂದೆ ವಿಷಯ ತಿಳಿದ ಯುವತಿ ಕಡೆಯವರು ಅವರ ಮೇಲೆ ಹಲ್ಲೆ ನಡೆಸಿ ಊರು ಬಿಡಿಸಿದ್ದರು. ಬಳಿಕ ಯುವಕ ತಂದೆ–ತಾಯಿಯೊಂದಿಗೆ ಗಾಂಧಿ ನಗರ ಬಡಾವಣೆಯ ಮಾರುತಿ ನಗರದಲ್ಲಿ ವಾಸವಾಗಿದ್ದಾರೆ. ಯುವತಿಯೊಂದಿಗೆ ಸಂಪರ್ಕದಲ್ಲಿದ್ದಾನೆಂಬ ಅನುಮಾನದಿಂದ ಆರೋಪಿಗಳು ಜೂನ್ 16ರಂದು ಯುವಕನನ್ನು ಬೆಳಗಾವಿಯಿಂದ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಕರೆಂಟ್ ಶಾಕ್ ಕೊಟ್ಟಿದ್ದರಿಂದ ಕಿಡ್ನಿಗೆ ತೊಂದರೆಯಾಗಿದೆ’ ಎಂದು ಪೋಷಕರು ದೂರು ನೀಡಿದ್ದಾರೆ.

‘ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಶಾಸಕರ ಮಧ್ಯಪ್ರವೇಶದಿಂದಾಗಿ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.