ADVERTISEMENT

ಅಕ್ರಮ ವಾಣಿಜ್ಯ ಸಂಕೀರ್ಣ ನೆಲಸಮ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2011, 19:45 IST
Last Updated 19 ಆಗಸ್ಟ್ 2011, 19:45 IST
ಅಕ್ರಮ ವಾಣಿಜ್ಯ ಸಂಕೀರ್ಣ ನೆಲಸಮ
ಅಕ್ರಮ ವಾಣಿಜ್ಯ ಸಂಕೀರ್ಣ ನೆಲಸಮ   

ಬೆಂಗಳೂರು: ಸುಮಾರು ಏಳು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ ಅದರಲ್ಲಿ ಕೊನೆಗೂ ಗೆಲುವು ಸಾಧಿಸಿದ ಬಿಬಿಎಂಪಿಯು ಬೊಮ್ಮನಹಳ್ಳಿ ವಲಯದ ಬಿಳೇಕಹಳ್ಳಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬಹು ಅಂತಸ್ತಿನ ವಾಣಿಜ್ಯ ಸಂಕೀರ್ಣ ಹಾಗೂ ಹಲವು ಕಟ್ಟಡಗಳನ್ನು ನೆಲಮಗೊಳಿಸಿತು.

ಆಸ್ತಿ ಮಾಲೀಕ ಶಾಂತರಾಜು ವಿರುದ್ಧ ಹೈಕೋರ್ಟ್‌ನಲ್ಲಿ ಹೋರಾಟ ನಡೆಸಿದ ಬಿಬಿಎಂಪಿ ಇತ್ತೀಚೆಗಷ್ಟೇ ಪ್ರಕರಣದಲ್ಲಿ ಗೆಲುವು ಸಾಧಿಸಿತ್ತು.ಬನ್ನೇರುಘಟ್ಟ ರಸ್ತೆಯ ಅಪೋಲೊ ಹಾಗೂ ಫೋರ್ಟಿಸ್ ಆಸ್ಪತ್ರೆಗಳ ನಡುವಿನ ಸರ್ವೆ ನಂ. 154/11ರಲ್ಲಿನ 2.37 ಎಕರೆ ಸರ್ಕಾರಿ ಜಾಗದಲ್ಲಿ ವ್ಯಾಪಿಸಿದ್ದ ಈ ವಾಣಿಜ್ಯ ಸಂಕೀರ್ಣದಲ್ಲಿ ಇಟ್ಟಿಗೆ ಕಾರ್ಖಾನೆ, ಕಾಫಿ ಹೌಸ್, ಬ್ಯಾಂಕ್ ಶಾಖೆ ಹಾಗೂ 15ರಿಂದ 20 ಮನೆಗಳಿದ್ದವು. ಇವುಗಳಿಂದ ಮಾಲೀಕ ಮಾಸಿಕ 6 ಲಕ್ಷ ರೂಪಾಯಿಗಳಷ್ಟು ಬಾಡಿಗೆ ಪಡೆಯುತ್ತಿದ್ದ.

ಆಸ್ತಿ ಮಾಲೀಕ ವಿವಿಧ ಸರ್ಕಾರಿ ಇಲಾಖೆಗಳಿಗೆ ಸೃಷ್ಟಿಸಿದ ದಾಖಲೆಗಳನ್ನು ನೀಡಿ ಆಸ್ತಿಯ ಹಕ್ಕು ಪಡೆದುಕೊಂಡಿದ್ದ. ಈ ಪ್ರಕರಣದ ಬಗ್ಗೆ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಮಾಲೀಕ ಸುಮಾರು ಏಳು ವರ್ಷಗಳ ಕಾಲ ಕಾನೂನು ಹೋರಾಟ ನಡೆಸ್ದ್ದಿದ.

ಪ್ರಕರಣದಲ್ಲಿ ಅಂತಿಮವಾಗಿ ಬಿಬಿಎಂಪಿ 2011ರ ಆಗಸ್ಟ್ 11ರಂದು ಹೈಕೋರ್ಟ್‌ನಲ್ಲಿ ಗೆಲುವು ಸಾಧಿಸಿತ್ತು. ಬಿಬಿಎಂಪಿಯು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಗುರುವಾರ ಸಂಕೀರ್ಣದ ನೆಲಸಮ ಕಾರ್ಯಾಚರಣೆ ಪ್ರಾರಂಭಿಸಿತು.

`ಕಾರ್ಯಾಚರಣೆಯನ್ನು ಬೇಗನೇ ಪ್ರಾರಂಭಿಸಿದೆವು. ಆದರೆ, ಬ್ಯಾಂಕ್ ಅಧಿಕಾರಿಗಳು ಲಾಕರ್ ತೆರವುಗೊಳಿಸಲು ಕಾಲಾವಕಾಶ ಕೋರಿದ್ದರಿಂದ ಸ್ವಲ್ಪ ವಿಳಂಬವಾಯಿತು. ಎಲ್ಲ ವಾಣಿಜ್ಯ ಮಳಿಗೆಗಳು ಹಾಗೂ ವಸತಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ ನಂತರವೇ ಕಾರ್ಯಾಚರಣೆ ನಡೆಸಲಾಯಿತು~ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಶಿವಬಸವಯ್ಯ ತಿಳಿಸಿದ್ದಾರೆ.
 
`ಆಸ್ತಿ ಮಾಲೀಕರು ಹಾಗೂ ಪಾಲಿಕೆ ನಡುವೆ ಮೊದಲಿನಿಂದಲೂ ಕಾನೂನು ಹೋರಾಟ ನಡೆಯುತ್ತಿದ್ದುದು ಬ್ಯಾಂಕ್ ಶಾಖೆಯ ಅಧಿಕಾರಿಗಳಿಗೂ ಗೊತ್ತಿತ್ತು. ಹೀಗಾಗಿ, ಶಾಖೆಯನ್ನು ಪರ್ಯಾಯ ಜಾಗಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡರು~ ಎಂದು  ತಿಳಿಸಿದರು.

`ಬ್ಯಾಂಕ್ ಶಾಖೆಯನ್ನು ಜೆ.ಪಿ.ನಗರಕ್ಕೆ ಸ್ಥಳಾಂತರಿಸಿದ್ದೇವೆ. ಮೊದಲಿನ ಸ್ಥಳದಿಂದ ಹೊಸ ಜಾಗ ಕೇವಲ ಒಂದು ಕಿ.ಮೀ.ನಷ್ಟೇ ದೂರವಿದೆ~ ಎಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಅಕ್ರಮ ವಾಣಿಜ್ಯ ಸಂಕೀರ್ಣನೆಲ ಸಮಗೊಳಿಸುವ ಕಾರ್ಯಾಚರಣೆ ಶುಕ್ರವಾರ ಕೊನೆಗೊಂಡಿದ್ದು, ಜಾಗದ ಸುತ್ತಲೂ ಬಿಬಿಎಂಪಿ ತಂತಿ ಬೇಲಿ ಹಾಗೂ ನಾಮಫಲಕ ಅಳವಡಿಸಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.