ADVERTISEMENT

ಅಧಿಕಾರಿಗಳ ಅಸಹಕಾರಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 19:30 IST
Last Updated 8 ಜೂನ್ 2011, 19:30 IST
ಅಧಿಕಾರಿಗಳ ಅಸಹಕಾರಕ್ಕೆ ಆಕ್ರೋಶ
ಅಧಿಕಾರಿಗಳ ಅಸಹಕಾರಕ್ಕೆ ಆಕ್ರೋಶ   

ಪೀಣ್ಯ ದಾಸರಹಳ್ಳಿ: `ಕೆಂಪೇಗೌಡ ನಗರದಲ್ಲಿ ದೊಡ್ಡ ಮೋರಿ ಒತ್ತುವರಿಯನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕೆಲಸ ಕಾರ್ಯಗಳಿಗೆ ಸ್ಪಂದಿಸದೇ ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ~ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಗಾಯಿತ್ರಿ ಜವರಾಯಿಗೌಡ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ದೂರಿನ ಮೇರೆಗೆ ರಾಜರಾಜೇಶ್ವರಿ ವಲಯದ ದೊಡ್ಡ ಬಿದರಕಲ್ಲು ವಾರ್ಡ್ ವ್ಯಾಪ್ತಿಯ ದೊಡ್ಡ ಮೋರಿಯ ಒತ್ತುವರಿ ಆಗಿರುವ ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ಮೋರಿ ಕಿರಿದಾಗಿರುವುದರಿಂದ ಮಳೆ ಬಂದಾಗ ನೀರು ತುಂಬಿ ಹರಿದು ಮನೆಗಳಿಗೆ ನುಗ್ಗಿ ತೊಂದರೆಗೊಳಗಾಗುತ್ತಿದೆ. ಆದರೂ ಅಧಿಕಾರಿಗಳು ಗಮನಕ್ಕೆ ತೆಗೆದುಕೊಳ್ಳದೇ ಆಡಳಿತ ಪಕ್ಷದ ಸದಸ್ಯರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು ತೊಂದರೆ ಪರಿಹರಿಸುತ್ತಿಲ್ಲ~ ಎಂದು ಆರೋಪಿಸಿದರು.

ಇಲ್ಲಿ ಖಾಸಗಿ ಶಾಲೆಯೊಂದು ಬಹುತೇಕ ಮೋರಿ ಒತ್ತುವರಿ ಮಾಡಿದ್ದರೆ ಹಾಗೂ ಶಾಲೆಯ, ಪಕ್ಕದಲ್ಲಿಯೇ ಇರುವ ಕಲ್ಯಾಣ ಮಂಟಪ, ಹೋಟೆಲ್‌ಗಳು ರಸ್ತೆ ನೀಲ ನಕ್ಷೆಯನ್ನೇ ಬದಲಿಸಿ ಜೊತೆಗೆ ಮಲಿನ ನೀರನ್ನು ಮೋರಿಗೆ ಬಿಟ್ಟಿವೆ ಎಂದು ಕಿಡಿ ಕಾರಿದರು.

ಮಾಗಡಿ ರಸ್ತೆಯಿಂದ ಕೆಂಪೇಗೌಡ ನಗರಕ್ಕೆ ಮೋರಿಯಿಂದಾಗಿ ಹಾದು ಹೋಗುವ ಸಂಪರ್ಕ ರಸ್ತೆಯೇ ಇಲ್ಲದೇ ಅಲ್ಲಿನವರು ಮೂರು ನಾಲ್ಕು ಕಿಲೋಮೀಟರ್ ಬಳಸಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಹೇರೋಹಳ್ಳಿ ಕೆರೆಯಿಂದ ನೈಸ್ ರಸ್ತೆಯವರಗೆ ಮೋರಿಯ ಒತ್ತುವರಿಯನ್ನು ತೆರವುಗೊಳಿಸದಿದ್ದರೆ ಬಿಬಿಎಂಪಿ ಕಚೇರಿಯ ಮುಂದೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.