ADVERTISEMENT

ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 19:30 IST
Last Updated 14 ಏಪ್ರಿಲ್ 2011, 19:30 IST

ಬೆಂಗಳೂರು: ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಠಾಣೆ ವ್ಯಾಪ್ತಿಯ ನಂದಿ ತಿರುವಿನಲ್ಲಿ ಬುಧವಾರ ರಾತ್ರಿ ನಡೆದಿದೆ. ಆರ್.ಟಿ ನಗರದ ಮನೋರಾಯನಪಾಳ್ಯದ ವಿನಯ್ (21) ಮತ್ತು ವಿಶ್ವನಾಥನಾಗೇನಹಳ್ಳಿಯ ವಿಜಯ್ (22) ಮೃತಪಟ್ಟವರು. ನಂದಿ ಬೆಟ್ಟದ ಕಡೆಯಿಂದ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ನಗರಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಅವರು, ತಿರುವು ಪಡೆಯುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿನಯ್ ಬ್ರಿಗೇಡ್ ರಸ್ತೆಯಲ್ಲಿರುವ ಕಾಲ್‌ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಿಜಯ್ ಪಿಯುಸಿ ವಿದ್ಯಾರ್ಥಿಯಾಗಿದ್ದರು. ಸ್ನೇಹಿತನಾದ ವಿಜಯ್‌ನನ್ನು ಕರೆದುಕೊಂಡು ನಂದಿ ಬೆಟ್ಟದ ಕಡೆ ಹೋಗಿದ್ದ ವಿನಯ್ ಅಲ್ಲಿಂದ ವಾಪಾಸ್ ಬರುವಾಗ ಈ ದುರ್ಘಟನೆ,ಸಂಭವಿಸಿದೆ. ಬಸ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಹೈದರಾಬಾದ್ ಕಡೆ ಸಂಚರಿಸುತ್ತಿದ್ದ ಬಸ್‌ನ ನೋಂದಣಿ ಸಂಖ್ಯೆ ಗೊತ್ತಾಗಿದ್ದು ವಾಹನವನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಕನಕ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಪ್ರಕರಣ ದಾಖಲಾಗಿದೆ.

ನಕಲಿ ಸಿ.ಡಿ ಮಾರಾಟ: ಬಂಧನ
ವಿವಿಧ ಭಾಷೆಗಳ ಚಲನಚಿತ್ರಗಳ ನಕಲಿ ಸಿ.ಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ದೇವರಜೀವನಹಳ್ಳಿಯ ಜಮ್ರತ್ ಪಾಷಾ (35) ಎಂಬಾತನನ್ನು ಬಂಧಿಸಿರುವ ನಗರ ಪೊಲೀಸರು ಹತ್ತು ಲಕ್ಷ ರೂಪಾಯಿ ಮೌಲ್ಯದ ಸಿ.ಡಿ ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಡುಗೊಂಡನಹಳ್ಳಿಯ ಬಿ.ಎಸ್.ಎ ರಸ್ತೆಯಲ್ಲಿರುವ ಮುಬಾರಕ್ ಕಾಂಪ್ಲೆಕ್ಸ್‌ನ ಅಂಗಡಿಯೊಂದರಲ್ಲಿ ಆತ ಸಿ.ಡಿ ಮಾರಾಟ ಮಾಡುತ್ತಿದ್ದ.  ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು ಚಿತ್ರಗಳ ನಕಲಿ ಸಿ.ಡಿ ಮತ್ತು ಅಶ್ಲೀಲ ಚಿತ್ರಗಳ ಸಿ.ಡಿಗಳನ್ನೂ ಆತ ಮಾರಾಟ ಮಾಡುತ್ತಿದ್ದ.  ಈ ಬಗ್ಗೆ ಖಚಿತ ಮಾಹಿತಿ ಪಡೆದು ಅಂಗಡಿಯ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆಕಸ್ಮಿಕ ಬೆಂಕಿ ಸಾವು
ಅಡುಗೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮಹಿಳೆಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಎಲೆಕ್ಟ್ರಾನಿಕ್‌ಸಿಟಿ ಸಮೀಪ ಲಕ್ಷ್ಮಿಲೇಔಟ್‌ನಲ್ಲಿ ಮಂಗಳವಾರ ನಡೆದಿದೆ. ಮಂಜುನಾಥ ಎಂಬುವರ ಪತ್ನಿ ಶೀಲಾ (24) ಮೃತಪಟ್ಟವರು. ಅವರು ಸಂಜೆ ಸೀಮೆ ಎಣ್ಣೆ ಸ್ಟೌನಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಸೀರೆಗೆ    ಆಕಸ್ಮಿಕವಾಗಿ ಬೆಂಕಿ   ಹೊತ್ತಿಕೊಂಡಿತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಸಾವನ್ನಪ್ಪಿದರು.  ಅವರಿಗೆ ನಾಲ್ಕು ವರ್ಷದ ಮಗಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.