ADVERTISEMENT

ಅಹಿಂದ ಸಮುದಾಯಕ್ಕೆ ಸಭಾ ಭವನ ನಿರ್ಮಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:15 IST
Last Updated 21 ಏಪ್ರಿಲ್ 2012, 19:15 IST

ಯಲಹಂಕ: ಡಾ.ಬಿ.ಆರ್.ಅಂಬೇಡ್ಕರ್‌ರವರ 121ನೇ ಜನ್ಮದಿನಾಚರಣೆ ಹಾಗೂ ಬಾಬು ಜಗಜೀವನ್‌ರಾಂ ಅವರ 105ನೇ ಜನ್ಮದಿನಾಚರಣೆ ಅಂಗವಾಗಿ ದಲಿತ ಸಂಘರ್ಷ ಸಮಿತಿ (ಸಮತಾವಾದ) ರಾಜ್ಯ ಸಮಿತಿಯ ವತಿಯಿಂದ ಶನಿವಾರ ಯಲಹಂಕದ ತಹಶೀಲ್ದಾರ್ ಕಚೇರಿಯಿಂದ ದೇವನಹಳ್ಳಿಯವರೆಗೆ ಬೈಕ್‌ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಬೈಕ್‌ರ‌್ಯಾಲಿಗೆ ಚಾಲನೆ ನೀಡಿದ ಸಮಿತಿಯ ರಾಜ್ಯ ಘಟಕದ ಉಪ ಪ್ರಧಾನ ಸಂಚಾಲಕ ಎಚ್.ಮಾರಪ್ಪ, `ಬಾಬಾಸಾಹೇಬ್ ಅಂಬೇಡ್ಕರ್‌ರವರ ಚಿಂತನೆ, ವಿಚಾರಧಾರೆಗಳು, ದಲಿತ ಮತ್ತು ಹಿಂದುಳಿದ ವರ್ಗದ ಜನರ ಅಭಿವೃದ್ಧಿಗಾಗಿ ನಡೆಸಿದ ಹೋರಾಟಗಳ ಬಗ್ಗೆ ಇಂದಿನ ಯುವಪೀಳಿಗೆಗೆ ಅರಿವು ಮೂಡಿಸುವ ಉದ್ದೇಶದಿಂದ ಬೈಕ್ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ~ ಎಂದರು.

ಗ್ರಾಮೀಣ ಭಾಗಗಳಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗಾಗಿ ಮದುವೆ ಇನ್ನಿತರ ಶುಭಕಾರ್ಯಗಳನ್ನು ನಡೆಸಲು ಅನುಕೂಲವಾಗುವಂತೆ ಸಮುದಾಯ ಭವನಗಳನ್ನು ನಿರ್ಮಿಸಿಬೇಕು. ದಲಿತ ಕಾಲೋನಿಗಳಲ್ಲಿ ಸಾಮೂಹಿಕ ಶೌಚಾಲಯದ ಬದಲು ಪ್ರತ್ಯೇಕ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು~ ಎಂದು ಅವರು ಒತ್ತಾಯಿಸಿದರು.

ರ‌್ಯಾಲಿಯಲ್ಲಿ ಸಮಿತಿಯ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಸಂಚಾಲಕ ಮುನಿಭೈರಪ್ಪ, ಉಪ ಪ್ರಧಾನ ಸಂಚಾಲಕ ಡಿ.ಚಂದ್ರಪ್ಪ, ಬೆಂಗಳೂರು ಉತ್ತರ ತಾಲ್ಲೂಕು ಪ್ರಧಾನ ಸಂಚಾಲಕ ಡಿ.ವಿ.ವೀರಭದ್ರೇಗೌಡ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.