ADVERTISEMENT

ಇಬ್ಬರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಬೆಂಗಳೂರು: ನಗರದ ಹಲಸೂರು ಮತ್ತು ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ವಿದ್ಯಾರ್ಥಿಯೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲಸೂರು ಸಮೀಪದ ಮುನಿಯಪ್ಪ ಕಾಂಪೌಂಡ್ ಬಡಾವಣೆಯಲ್ಲಿ ಶನಿವಾರ ಸಂಜೆ ನಡೆದಿದೆ.

  ತರಕಾರಿ ವ್ಯಾಪಾರಿ ನಾರಾಯಣ ಎಂಬುವರ ಪುತ್ರ ಕಾರ್ತಿಕ್ (21) ಆತ್ಮಹತ್ಯೆ ಮಾಡಿಕೊಂಡವರು. ಅವರು ಇಂದಿರಾನಗರದ ಜೈನ್ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಾರ್ತಿಕ್ ಮನೆಯ ಸಮೀಪವೇ ಸಂಜೆ ಐದು ಗಂಟೆ ಸುಮಾರಿಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಅಸ್ವಸ್ಥಗೊಂಡಿದ್ದ ಅವರನ್ನು ಕುಟುಂಬ ಸದಸ್ಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಹಲಸೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಲ ಬಾಧೆ ಪ್ರಕರಣ
ಹೆಬ್ಬಾಳ ಸಮೀಪದ ಸನ್‌ರೈಸ್ ಕಾಲೊನಿ ನಿವಾಸಿ ಕನ್ಯಾಕುಮಾರಿ (33) ಎಂಬುವರು ಸಾಲ ಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ತ್ರೀಶಕ್ತಿ ಸಂಘದ ಸದಸ್ಯರಾಗಿದ್ದ ಕನ್ಯಾಕುಮಾರಿ, ಪತಿ ನಂದಕುಮಾರ್ ಅವರಿಗೆ ತಿಳಿಯದಂತೆ ಸಂಘದಿಂದ ಸಾಕಷ್ಟು ಸಾಲ ತೆಗೆದುಕೊಂಡಿದ್ದರು.

ದಂಪತಿಗೆ ಇಬ್ಬರು ಮಕ್ಕಳಿದ್ದು, ಮನೆಯಲ್ಲಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಅವರು ನೇಣು ಹಾಕಿಕೊಂಡಿದ್ದಾರೆ. ಮಕ್ಕಳು ರಾತ್ರಿ ಎರಡು ಗಂಟೆ ಸುಮಾರಿಗೆ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು    ಹೇಳಿದ್ದಾರೆ.

`ಸಾಲ ಮಾಡಿರುವುದು ಪತಿಗೆ ಗೊತ್ತಿರಲಿಲ್ಲ. ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ಪತಿಯ ಬಳಿ ಸಾಲದ ಹಣ ಕೇಳಬೇಡಿ~ ಎಂದು ಕನ್ಯಾಕುಮಾರಿ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.