ADVERTISEMENT

ಉದ್ಯೋಗ ಆಮಿಷ : ವಂಚಕನ ಬಂಧನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:49 IST
Last Updated 12 ಡಿಸೆಂಬರ್ 2013, 19:49 IST
ಆರೋಪಿ ಧನಂಜಯ್‌
ಆರೋಪಿ ಧನಂಜಯ್‌   

ಬೆಂಗಳೂರು: ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 250 ಮಂದಿಯಿಂದ ಒಟ್ಟು ರೂ 2.5 ಕೋಟಿ ಹಣ ಪಡೆದು ವಂಚಿಸಿದ್ದ ಧನಂಜಯ್‌ ಅಲಿಯಾಸ್‌ ರಾಜುರೆಡ್ಡಿ (24) ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಆತನಿಂದ ರೂ 1 ಕೋಟಿ 94 ಸಾವಿರ ನಗದು, 605 ಗ್ರಾಂ ಚಿನ್ನಾಭರಣ, ಬೆಲೆಬಾಳುವ ಪೀಠೋಪಕ ರಣಗಳು, ಒಂದು ಬೈಕ್‌ ಸೇರಿದಂತೆ ಒಟ್ಟು ರೂ 1.21 ಕೋಟಿ  ಮೌಲ್ಯದ ವಸ್ತುಗಳನ್ನು ವಶಪಡಿಸಿಕೊ ಳ್ಳಲಾಗಿದೆ.

‘ಆನೇಕಲ್‌ ಬಳಿಯ ಅನಂತನಗರದ ಆರೋಪಿಯು ಆರು ತಿಂಗಳ ಹಿಂದೆ ಕೋರಮಂಗಲ ಐದನೇ ಬ್ಲಾಕ್‌ನಲ್ಲಿ ‘ಲೈಫ್‌ ಟೈಮ್‌ ಸಾಫ್ಟ್‌ ಟೆಕ್‌’ ಎಂಬ ಹೆಸರಿನ ಕಂಪೆನಿ ತೆರೆದಿದ್ದ. ವೆಬ್‌ ಡಿಸೈನಿಂಗ್‌, ಜಾವಾ ಟೆಸ್ಟಿಂಗ್‌ ಸೇರಿದಂತೆ ಇನ್ನಿತರ ವಿಷಯಗಳ ತರಬೇತಿ ನೀಡಿ, ನಂತರ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆತ ಹಲವರಿಗೆ ವಂಚಿಸಿದ್ದ’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

‘ಆರೋಪಿಯು ಆನ್‌ಲೈನ್‌ ಉದ್ಯೋಗ ಮಾಹಿತಿ ತಾಣ ‘ನೌಕರಿ ಡಾಟ್‌ ಕಾಂ’ ಮತ್ತು ಒಎಲ್‌ಎಕ್ಸ್‌ ಕ್ಲಾಸಿಫೈಡ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಜಾಹೀ ರಾತು ನೀಡಿದ್ದ. ತರಬೇತಿ ಹಾಗೂ ಉದ್ಯೋಗದ ಭದ್ರತಾ ಠೇವಣಿಗೆಂದು ಪ್ರತಿ ಅಭ್ಯರ್ಥಿಯಿಂದ ರೂ 1 ಲಕ್ಷದ ಡಿ.ಡಿ ಪಡೆದುಕೊಂಡಿದ್ದ’ ಎಂದು ಅವರು ತಿಳಿಸಿದರು.

ಅಭ್ಯರ್ಥಿಗಳು ಡಿ.ಡಿ ನೀಡಿ ತಿಂಗಳುಗಳು ಕಳೆದರೂ ತರಬೇತಿ ಆರಂಭವಾಗಿರಲಿಲ್ಲ. ಈ ಬಗ್ಗೆ ಕೆಲ ಅಭ್ಯರ್ಥಿಗಳು ಕಚೇರಿಯಲ್ಲಿ ಪ್ರಶ್ನಿಸಿದ್ದರು. ಜನವರಿ ಯಿಂದ ತರಬೇತಿ ಆರಂಭಿಸುವುದಾಗಿ ತಿಳಿಸಿದ್ದ ಆರೋಪಿ ಡಿ.3ರಂದು ಕಚೇರಿ ಮುಚ್ಚಿ ನಾಪತ್ತೆ ಯಾಗಿದ್ದ. ಆತನಿಂದ ವಂಚನೆಗೆ ಒಳಗಾದ ಶಿವಕುಮಾರ್‌ ಎಂಬುವರು ಈ ಬಗ್ಗೆ ಕೋರಮಂಗಲ ಠಾಣೆಗೆ ದೂರು ನೀಡಿದ್ದರು.

ಆರೋಪಿಯು ಆಂಧ್ರಪ್ರದೇಶದಲ್ಲಿ ತಲೆಮರೆಸಿ ಕೊಂಡಿದ್ದ. ಆತನ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆತನನ್ನು ಬಂಧಿಸಲಾಯಿತು. ವಂಚನೆಗೆ ಸಹಕರಿಸಿದ ಆರೋಪವಿರುವ ಕಂಪೆನಿಯ ವ್ಯವಸ್ಥಾಪಕ ಖಾದರ್‌ ವಾಲಿ, ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿಗಳಾದ ಸುನೀಲ್‌ ನಾಗೇಂದ್ರ, ಜಾವಿದ್ ಬಾಷಾ ಮತ್ತು ಮಾನವ ಸಂಪನ್ಮೂಲ ವಿಭಾಗದ ನಾಗಶ್ರೀ ಎಂಬುವರು ನಾಪತ್ತೆಯಾಗಿದ್ದಾರೆ. ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತನಿಖಾ ಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.