ADVERTISEMENT

ಎರ್ರಾಬಿರ್ರಿ ಮರ ಕಡಿತ: ನೋಟಿಸ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST

ಬೆಂಗಳೂರು: ರಸ್ತೆ ವಿಸ್ತರಣೆಯ ಹೆಸರಿನಲ್ಲಿ ಎರ್ರಾಬಿರ್ರಿ ಮರಗಿಡಗಳನ್ನು ಕಡಿಯುತ್ತಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೆ ಆದೇಶಿಸಿದೆ.ನಿಯಮ ಉಲ್ಲಂಘಿಸಿ ಮರಗಳನ್ನು ಕಡಿಯುತ್ತಿರುವ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಆಧರಿಸಿದ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಅವರು ಈ ಕುರಿತು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಅವರಿಗೆ ಪತ್ರ ಬರೆದಿದ್ದರು.

ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯಡಿ ಮರಗಳನ್ನು ಕಡಿಯುವಾಗ ಸಾರ್ವಜನಿಕರ ಅಹವಾಲು ಆಲಿಸಬೇಕು,ಅವರಿಂದ ಆಕ್ಷೇಪಣೆ ಕೇಳಬೇಕು. ಒಂದು ಮರ ಕಡಿದರೆ ಪರ್ಯಾಯವಾಗಿ ಮತ್ತೆರಡು ಮರ ನೆಡಬೇಕು ಇತ್ಯಾದಿ ಷರತ್ತುಗಳು ಇವೆ. ಆದರೆ ಇವಾವುದನ್ನೂ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಕಾಯ್ದೆ ಅಡಿ ಸಮಿತಿ ರಚನೆಗೆ ಹಾಗೂ ಬೆಂಗಳೂರಿನ ಮಟ್ಟಿಗೆ ಮೆಟ್ರೊ ಯೋಜನಾ ಸಮಿತಿಯನ್ನು ರಚಿಸಲು ಆದೇಶಿಸುವಂತೆ ಅದರಲ್ಲಿ ಕೋರಲಾಗಿದೆ.ಈ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿರುವ ನ್ಯಾ.ಕೇಹರ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯನ್ನು  ಕೈಗೆತ್ತಿಕೊಂಡಿದೆ.

ಟ್ರಸ್ಟ್ ಮೇಲೆ ದಾಳಿ: ನೋಟಿಸ್
ಮಕ್ಕಳಿಗೆ ಸರಿಯಾದ ಸೌಕರ್ಯ ನೀಡದ ಆರೋಪದ ಮೇಲೆ ಜ್ಞಾನಭಾರತಿ ಬಳಿ ಇರುವ ‘ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್’ ಮೇಲೆ ದಾಳಿ ನಡೆಸಿ ಅಲ್ಲಿದ್ದ 14 ಮಕ್ಕಳನ್ನು ಕರೆದುಕೊಂಡು ಹೋಗಿರುವ ಕ್ರಮವನ್ನು ಟ್ರಸ್ಟ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಮಕ್ಕಳ ಹಕ್ಕು ಆಯೋಗದ ಸದಸ್ಯರು ನಡೆಸಿರುವ ದಾಳಿಯನ್ನು ಟ್ರಸ್ಟ್ ಪ್ರಶ್ನಿಸಿದೆ. ತಾವು ಮಕ್ಕಳಿಗೆ ಸರಿಯಾದ ಸೌಕರ್ಯ ನೀಡುತ್ತಿದ್ದರೂ ವಿನಾಕಾರಣ ಸುಳ್ಳು ಆರೋಪ ಹೊರಿಸಲಾಗಿದೆ ಎನ್ನುವುದು ಅದರ ದೂರು. ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಆಯೋಗ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದ್ದಾರೆ. ಆಯೋಗದ ಅಧ್ಯಕ್ಷೆ ನೀನಾ ನಾಯಕ್ ಕೋರ್ಟ್‌ನಲ್ಲಿ ಹಾಜರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.