ADVERTISEMENT

ಏರೋಸ್ಪೇಸ್: ಮಾಹಿತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ `ಏರ್‌ಕ್ರಾಫ್ಟ್ ಕಾಂಪೋನೆಂಟ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್~ (ಏರೋಸ್ಪೇಸ್ ಯೋಜನೆ)ಗೆ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಪರಿಹಾರವನ್ನು ವಿತರಣೆ ಮಾಡಲು ಯಾವ ಮಾದರಿಯನ್ನು ಅನುಸರಿಸಲಾಗಿದೆ ಎಂಬ ಮಾಹಿತಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹೈಕೋರ್ಟ್ ಮಂಗಳವಾರ ಬಯಸಿದೆ.

ಇಲ್ಲಿಯವರೆಗೆ ಪರಿಹಾರವನ್ನು ಎಷ್ಟು ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ, ಅದನ್ನು ಅವರು ಯಾವ ರೀತಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ನೀಡುವಂತೆಯೂ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಮಂಡಳಿಗೆ ನಿರ್ದೇಶಿಸಿದ್ದಾರೆ.

ಪರಿಹಾರದ ಹಣವನ್ನು ಯಾವ ರೀತಿ ಬಳಸಿಕೊಳ್ಳಬೇಕು, ಜೀವಿತಾವಧಿಯವರೆಗೆ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಭೂಮಾಲೀಕರಿಗೆ ಸರ್ಕಾರದಿಂದ ಕೌನ್ಸೆಲಿಂಗ್ ಅಥವಾ ಮಾರ್ಗದರ್ಶನ ದೊರೆತಿದೆಯೇ ಎಂಬ ಮಾಹಿತಿ ನೀಡುವಂತೆಯೂ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಇವುಗಳಿಗೆ ಸಂಬಂಧಿಸಿದ ದಾಖಲೆ ನೀಡುವಂತೆ ತಿಳಿಸಿದ್ದಾರೆ.

ಯೋಜನೆಗೆ ದೇವನಹಳ್ಳಿ ಬಳಿಯ ಜಮೀನು ಸ್ವಾಧೀನ ಪಡಿಸಿಕೊಂಡು 2007ರ ಜ.9 ಹಾಗೂ ಅದೇ ಸಾಲಿನ ಮೇ 15ರಂದು ಹೊರಡಿಸಲಾದ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.