ADVERTISEMENT

`ಒಂದು ಮಾತಿನ ಈರಣ್ಣ'ನ ನೂರು ನೆನಪು

​ಪ್ರಜಾವಾಣಿ ವಾರ್ತೆ
Published 2 ಜನವರಿ 2013, 19:59 IST
Last Updated 2 ಜನವರಿ 2013, 19:59 IST
ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಬುಧವಾರ ರಂಗಕರ್ಮಿ ಎ.ಎಸ್. ಮೂರ್ತಿ ಅವರಿಗೆ ಏರ್ಪಡಿಸಿದ್ದ ರಂಗ ನಮನ ಕಾರ್ಯಕ್ರಮದಲ್ಲಿ ಮೂರ್ತಿ ಅವರ ಭಾವಚಿತ್ರಕ್ಕೆ ಟಿ.ಜಿ. ನರಸಿಂಹಮೂರ್ತಿ, ಪ್ರೊ. ಎಂ.ಎಚ್. ಕೃಷ್ಣಯ್ಯ, ಚಿ.ಸು. ಕೃಷ್ಣಶೆಟ್ಟಿ, ತಿರುಮಲ ಶ್ರೀರಂಗಾಚಾರ್ಯ, ಭಾರ್ಗವಿ ನಾರಾಯಣ, ಹೇಮಾ ಪಟ್ಟಣಶೆಟ್ಟಿ ಪುಷ್ಪ ನಮನ ಸಲ್ಲಿಸಿದರು
ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಬುಧವಾರ ರಂಗಕರ್ಮಿ ಎ.ಎಸ್. ಮೂರ್ತಿ ಅವರಿಗೆ ಏರ್ಪಡಿಸಿದ್ದ ರಂಗ ನಮನ ಕಾರ್ಯಕ್ರಮದಲ್ಲಿ ಮೂರ್ತಿ ಅವರ ಭಾವಚಿತ್ರಕ್ಕೆ ಟಿ.ಜಿ. ನರಸಿಂಹಮೂರ್ತಿ, ಪ್ರೊ. ಎಂ.ಎಚ್. ಕೃಷ್ಣಯ್ಯ, ಚಿ.ಸು. ಕೃಷ್ಣಶೆಟ್ಟಿ, ತಿರುಮಲ ಶ್ರೀರಂಗಾಚಾರ್ಯ, ಭಾರ್ಗವಿ ನಾರಾಯಣ, ಹೇಮಾ ಪಟ್ಟಣಶೆಟ್ಟಿ ಪುಷ್ಪ ನಮನ ಸಲ್ಲಿಸಿದರು   

ಬೆಂಗಳೂರು: ಒಂದಿಷ್ಟು ಮಾತು, ನೂರಾರು ನೆನಪು, ನಡು-ನಡುವೆ ರಂಗದ ಹಾಡು, ತಬಲಾ-ಹಾರ‌್ಮೋನಿಯಂ ನಿನಾದ, ಆಗೊಂದು, ಈಗೊಂದು ಬೀದಿ ನಾಟಕ!`ಒಂದು ಮಾತಿನ ಈರಣ್ಣ'ನೆಂದೇ ಖ್ಯಾತವಾಗಿದ್ದ ರಂಗಕರ್ಮಿ ಎ.ಎಸ್. ಮೂರ್ತಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯು ಸಂಸ ಬಯಲು ರಂಗಮಂದಿರದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ `ರಂಗ ನಮನ' ಕಾರ್ಯಕ್ರಮದ ನೋಟ ಇದು.

ಮೂರ್ತಿ ಅವರ ಬಾಲ್ಯದ ಸ್ನೇಹಿತರು, ರಂಗದ ಗೆಳೆಯರು, `ಗುಂಡು' ಮೇಜಿನ ಬಳಗ, ಕುಟುಂಬದ ಸದಸ್ಯರು, ರಂಗಕರ್ಮಿಗಳು ಮತ್ತು ಅಭಿಮಾನಿಗಳು ಎಲ್ಲರೂ ಅಲ್ಲಿ ನೆರೆದಿದ್ದರು. ಬಾಲ್ಯದ ಗೆಳೆಯ ತಿರುಮಲ ಶ್ರೀರಂಗಾಚಾರ್ಯ, ಮೂರ್ತಿ ಅವರ ಬಹುಮುಖ ವ್ಯಕ್ತಿತ್ವವನ್ನು ನೆನೆದು ಭಾವುಕರಾದರು. `ನಮ್ಮ ಮೂರ್ತಿ ಅಳಿದ ಮೇಲೂ ಉಳಿದಿದ್ದಾನೆ. ತನ್ನ ನೂರಾರು ನಾಟಕಗಳ ಮೂಲಕ ಆತ ಜೀವಂತವಾಗಿದ್ದಾನೆ' ಎಂದು ಹೇಳಿದರು.

ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಚ್. ಕೃಷ್ಣಯ್ಯ, `ಆಕಾಶವಾಣಿಗೆ ರಕ್ತ-ಮಾಂಸ ತುಂಬಿದ ವ್ಯಕ್ತಿತ್ವ ನೀಡಿದವರು ಮೂರ್ತಿ. ಅವರ ರಂಗ ಕ್ರಿಯಾಶೀಲತೆ ಬೆರಗು ಮೂಡಿಸುವಂತಹದ್ದು. ರಂಗಭೂಮಿಗೆ ಹಲವು ಆಯಾಮ ನೀಡಿದ ಅವರು, ಕ್ರಿಯಾಶೀಲತೆಗೆ ಸಂಕೇತವಾಗಿದ್ದರು' ಎಂದು ಕೊಂಡಾಡಿದರು.

`ನಾಟಕ, ಸಂಗೀತ, ಸಿನಿಮಾ, ನೃತ್ಯ, ಚಿತ್ರಕಲೆ, ಕರಕುಶಲ ಕಲೆ ಹೀಗೆ ಕಲೆಯೊಳಗಿನ ಎಲ್ಲ ಪ್ರಕಾರಗಳಲ್ಲೂ ಮೂರು ತಲೆಮಾರಿನ ಮಂದಿ ತೊಡಗಿಸಿಕೊಂಡ ಕನ್ನಡದ ಏಕೈಕ ಕುಟುಂಬ ಮೂರ್ತಿ ಅವರದ್ದಾಗಿದೆ' ಎಂದು ಅಭಿಮಾನದಿಂದ ಹೇಳಿದರು. ಮೂರ್ತಿ ಅವರ `ಅಂತರಂಗದ ಕದವ ತೆರೆದು' ಲೇಖನವನ್ನು ಪುಸ್ತಕದ ರೂಪದಲ್ಲಿ ಅಚ್ಚು ಹಾಕಿಸಬೇಕು ಎಂದು ಸಲಹೆ ನೀಡಿದರು.

ಚಿತ್ರಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ, `ಶ್ರೇಷ್ಠತೆ ವ್ಯಸನ ಬೆಳೆಸಿಕೊಳ್ಳದ ಮೂರ್ತಿ, ಸಮಾಜದಲ್ಲಿ ಜಾಗೃತಿ ಮೂಡಿಸುವ ತುಡಿತ ಹೊಂದಿದ್ದರು. ಆದ್ದರಿಂದಲೇ ಬೀದಿನಾಟಕವನ್ನು ಅವರು ಆಂದೋಲನವನ್ನಾಗಿ ಬೆಳೆಸಿದರು' ಎಂದು ತಿಳಿಸಿದರು.

`ಒಂದು ಮಾತಿನ ಈರಣ್ಣ'ನಾಗಿ ಸಾವಿರಾರು ನೆನಪು, ನೂರಾರು ನಾಟಕಗಳನ್ನು ಬಿಟ್ಟು ಹೋಗಿದ್ದಾರೆ ಮೂರ್ತಿ. ನಮ್ಮಂಥ ಕಲಾವಿದರಿಗೆ ಅವರೇ ದ್ರೋಣಾಚಾರ್ಯ. ರಾಜದೂತ್ ಮೋಟಾರ್ ಬೈಕ್ ಮೇಲೆ ಬೀದಿ-ಬೀದಿ ಸುತ್ತಿ ಕನ್ನಡದ ಕೆಲಸ ಮಾಡಿದ ಅವರ ಸೇವೆಯನ್ನು ಮರೆಯುವಂತಿಲ್ಲ' ಎಂದು ರಂಗಕರ್ಮಿ ಕೆ.ವಿ. ನಾಗರಾಜಮೂರ್ತಿ ಸ್ಮರಿಸಿದರು.

ಚಿತ್ರಾ ಹಾಗೂ ಸಮುದಾಯ ತಂಡದವರು ಬೀದಿ ನಾಟಕ ಪ್ರದರ್ಶಿಸಿದರು. ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ಮಾಜಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಆರ್. ರಾಮಕೃಷ್ಣ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.