ADVERTISEMENT

`ಕಾವ್ಯ ಸೌಂದರ್ಯದ ಕೊರತೆ'

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 20:15 IST
Last Updated 12 ಏಪ್ರಿಲ್ 2013, 20:15 IST

ಬೆಂಗಳೂರು: ಇತ್ತೀಚಿನ ಕವಿಗಳ ಕವಿತೆಯಲ್ಲಿ ಸೌಂದರ್ಯವಾಗಲಿ, ಕಾವ್ಯ ಸೌಂದರ್ಯವಾಗಲಿ ಕಾಣಬರುವುದಿಲ್ಲ ಎಂದು ಹಿರಿಯ ಕವಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ಅನ್ವೇಷಣೆ ವೇದಿಕೆಯು, ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಆಶ್ರಯದಲ್ಲಿ ವಿಜಯನಗರದಲ್ಲಿ ಗುರುವಾರ ಏರ್ಪಡಿಸಿದ್ದ ಯುಗಾದಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕವಿಗೆ ಸೌಂದರ್ಯವನ್ನು ನೋಡುವ ಪ್ರಜ್ಞೆ ಇರಬೇಕು. ತಾನು ಕಂಡ ಸೌಂದರ್ಯಾನುಭವದ ಅನುಭೂತಿಯನ್ನು ಕಾವ್ಯದ ಮೂಲಕ ಓದುಗನಿಗೆ ಉಣಬಡಿಸಬೇಕು. ಕನ್ನಡದ ಶ್ರೇಷ್ಠ ಕವಿತೆಗಳು ಇಂತಹ ಕೆಲಸವನ್ನು ಮಾಡಿವೆ. ಆದರೆ ಇತ್ತೀಚಿನ ಕವಿತೆಗಳು ನಿರಾಸೆ ಹುಟ್ಟಿಸಿವೆ ಎಂದು ಹಲವು ದೃಷ್ಟಾಂತಗಳ ಮೂಲಕ ವಿವರಿಸಿದರು. ಡಾ.ಎಚ್.ಎಲ್.ಪುಷ್ಪ, ಮಮತಾ ಜಿ.ಸಾಗರ್, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ರಮೇಶ್ ಜಂಬೂರು, ಡಾ.ಎಲ್.ಜಿ.ಮೀರಾ, ಡಿ.ನಳಿನ, ಪ್ರದೀಪ ಮಾಲ್ಗುಡಿ, ಟಿ.ಪದ್ಮ, ಮಾಲತೇಶ ಅರಸು, ಶಶಿಧರ ಶರ್ಮ, ಸುಬ್ರಾಯ ಭಟ್ಟ, ಹಾಜಿರಾ ಖಾನಂ, ಗುಂಡಿಗೆರೆ ವಿಶ್ವನಾಥ್, ಸುಭಾಷ್‌ಚಂದ್ರ, ಎಲ್.ಎನ್.ಮುಕುಂದರಾಜ್ ಕವಿತೆ ವಾಚನ ಮಾಡಿದರು.

ಕ್ರೀಡಾ ಇಲಾಖೆ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ಉದ್ಘಾಟಿಸಿದರು. ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀಉಲ್ಲಾ ಖಾನ್, ಬೆಂಗಳೂರು ನಗರ ಜಿಲ್ಲೆ ಕಸಾಪ ಗೌರವ ಕಾರ್ಯದರ್ಶಿ ಪಿನಾಕ ಪಾಣಿ, ಹಿರಿಯ ವಕೀಲ ರೇವಣಸಿದ್ದಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಾಟಕಕಾರ ಪ್ರೊ.ರಂಗನಾಥ ಭಾರದ್ವಾಜ್ ಅವರಿಗೆ ಅನ್ವೇಷಣೆ ವೇದಿಕೆ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಅನ್ವೇಷಣೆ ವೇದಿಕೆಯ ಸಂಚಾಲಕ ಆರ್.ಜಿ.ಹಳ್ಳಿ ನಾಗರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.