ADVERTISEMENT

ಕುಡಿದು ಚಾಲನೆ: ಬಿಎಂಟಿಸಿ ಚಾಲಕನ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 20:13 IST
Last Updated 8 ಡಿಸೆಂಬರ್ 2017, 20:13 IST
ಕುಡಿದು ಚಾಲನೆ: ಬಿಎಂಟಿಸಿ ಚಾಲಕನ ವಿರುದ್ಧ ಪ್ರಕರಣ
ಕುಡಿದು ಚಾಲನೆ: ಬಿಎಂಟಿಸಿ ಚಾಲಕನ ವಿರುದ್ಧ ಪ್ರಕರಣ   

ಬೆಂಗಳೂರು: ಮದ್ಯ ಕುಡಿದು ಬಸ್‌ ಚಲಾಯಿಸುತ್ತಿದ್ದ ಬಿಎಂಟಿಸಿ ಚಾಲಕ ಅಶೋಕ ಎಂಬುವರ ವಿರುದ್ಧ ಹಲಸೂರು ಗೇಟ್‌ ಸಂಚಾರ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾಂತಿನಗರದ 3ನೇ ಡಿಪೊದಲ್ಲಿ ಕೆಲಸ ಮಾಡುವ ಅಶೋಕ, ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕೆಎ 27 ಎಫ್‌ 1511 ನೋಂದಣಿ ಸಂಖ್ಯೆಯ ಬಸ್‌  ಚಲಾಯಿಸಿಕೊಂಡು ಜಯನಗರದತ್ತ ಹೊರಟಿದ್ದರು. ಹಡ್ಸನ್‌ ವೃತ್ತದ ಬಳಿ ಬಸ್ಸನ್ನು ಕಾರಿಗೆ ಗುದ್ದಿಸಿದ್ದರು. ರಸ್ತೆ ಮಧ್ಯೆದಲ್ಲೇ ಕಾರು ನಿಲ್ಲಿಸಿದ್ದ ಅದರ ಚಾಲಕ, ಅಶೋಕ ಅವರ ಜತೆ ಜಗಳ ಮಾಡಲು ಶುರು ಮಾಡಿದ್ದರು.

ಆಗ ಸ್ಥಳದಲ್ಲಿ ದಟ್ಟಣೆ ಉಂಟಾಗಿ, ಬೇರೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಅದನ್ನು ಗಮನಿಸಿದ ಪಿಎಸ್‌ಐ ಎಚ್‌.ಬಿ.ರಾಮಲಿಂಗಯ್ಯ ಹಾಗೂ ಸಿಬ್ಬಂದಿ, ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಬಸ್‌ ಚಲಾಯಿಸಿಕೊಂಡು ಹೋಗುವಂತೆ ಚಾಲಕನಿಗೆ ಹೇಳಿದ್ದರು. ಮದ್ಯದ ಅಮಲಿನಲ್ಲಿದ್ದ ಚಾಲಕನಿಗೆ ಬಸ್‌ ಚಲಾಯಿಸಿಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಅನುಮಾನಗೊಂಡ ಪೊಲೀಸರು, ಆಲ್ಕೋಮೀಟರ್‌ನಲ್ಲಿ ತಪಾಸಣೆ ನಡೆಸಿದಾಗ ಮಧ್ಯ ಕುಡಿದಿದ್ದು ಖಾತ್ರಿಯಾಗಿದೆ.

ADVERTISEMENT

‘ಅಶೋಕ ಅವರ ದೇಹದಲ್ಲಿ 140 ಮಿಲಿ ಗ್ರಾಂ ಮದ್ಯದ ಅಂಶವಿತ್ತು. ಪ್ರಕರಣ ದಾಖಲಿಸಿಕೊಂಡು ನೋಟಿಸ್‌ ಕೊಟ್ಟಿದ್ದೇವೆ. ಬಸ್‌ ಜಪ್ತಿ ಮಾಡಿದ್ದು, ಅದನ್ನು ನ್ಯಾಯಾಲಯದ ಮೂಲಕ ಬಿಡುಗಡೆ ಮಾಡಿಸಿಕೊಳ್ಳಬೇಕು’ ಎಂದು ಹಲಸೂರು ಗೇಟ್‌ ಸಂಚಾರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.