ADVERTISEMENT

ಕುಡಿಯುವ ನೀರಿಗೆ 100 ಕೋಟಿ: ಸಿಎಂ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಬೆಂಗಳೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರೂ 100 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶುಕ್ರವಾರ ಇಲ್ಲಿ ಹೇಳಿದರು.

 ಗೃಹ ಕಚೇರಿ `ಕೃಷ್ಣಾ~ದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, `ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ ಕೆಲವು ಹೊಸ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಅಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುವುದು ಅಥವಾ ಹೊಸ ಕೊಳವೆ ಬಾವಿ ಕೊರೆಯುವ ಮೂಲಕ ನೀರಿನ ಸಮಸ್ಯೆ ಪರಿಹರಿಸಲಾಗುವುದು~ ಎಂದು ಹೇಳಿದರು.

ನಗರ ಶಾಸಕರು, ಸಚಿವರ ಜತೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

ಕಾವೇರಿ ನಾಲ್ಕನೇ ಹಂತದ ಎರಡನೇ ಘಟಕದ ಕಾರ್ಯ ಪೂರ್ಣಗೊಳ್ಳುವವರೆಗೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಅನಿವಾರ್ಯ. ಈ ಕುರಿತು ಜಲಮಂಡಳಿ ಅಧಿಕಾರಿಗಳ ಜೊತೆಗೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ತಮ್ಮ ನಿವಾಸದಲ್ಲಿ ನಗರದ ಬಿಜೆಪಿ ಶಾಸಕರ ಸಭೆ ನಡೆಸಿದರು. ಬೇಸಿಗೆಯಲ್ಲಿ ನಗರದಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಶಾಸಕರು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟರು.

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ವಾರ್ಡ್‌ಗಳಲ್ಲಿ ಇನ್ನೂ ಕಾವೇರಿ ನೀರು ಪೂರೈಸುವುದು ವಿಳಂಬವಾಗಲಿದೆ. ಇದರಿಂದ ಎಲ್ಲೆಲ್ಲಿ ತುರ್ತು ಅಗತ್ಯವಿದೆಯೋ ಅಲ್ಲಲ್ಲಿ ಕೊಳವೆಬಾವಿ ಕೊರೆದು ಕುಡಿಯುವ ನೀರಿನ ಬವಣೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಶಾಸಕರು ಒತ್ತಾಯಿಸಿದರು.

ಇನ್ನು, ಕಾವೇರಿ ನೀರು ಪೂರೈಕೆಯಾಗುವ ನಗರದ ಮಧ್ಯ ಭಾಗದ ಕೆಲ ಭಾಗಗಳಲ್ಲಿಯೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಇಂತಹ ಕಡೆಗಳಲ್ಲಿ ಹಾಳಾದ ಕೊಳವೆಬಾವಿಗಳನ್ನು ದುರಸ್ತಿಪಡಿಸಲು ಶಾಸಕರು ಆಗ್ರಹಿಸಿದರು.

ಬಿಜೆಪಿ ಶಾಸಕರು ಮಾತ್ರ ಸಭೆ ಸೇರಿರುವುದರಿಂದ ಬೇರೆ ಪಕ್ಷಗಳ ಶಾಸಕರಿಗೆ ಬೇರೆ ರೀತಿಯ ಸಂದೇಶ ರವಾನೆಯಾಗಬಾರದು. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಇಡೀ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಶಾಸಕರು ಮನವಿ ಮಾಡಿದರು. ಅದಕ್ಕೆ ಮುಖ್ಯಮಂತ್ರಿ ಸಮ್ಮತಿ ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಹೊರತುಪಡಿಸಿ ಇತರೆ ಯಾವುದೇ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಈ ಒಂದಂಶದ ಬಗ್ಗೆ ಮಾತ್ರ ಚರ್ಚೆ ನಡೆಯಿತು. ಅರವಿಂದ ಲಿಂಬಾವಳಿ ಹೊರತುಪಡಿಸಿ ನಗರದ ಉಳಿದೆಲ್ಲಾ ಬಿಜೆಪಿ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.