ADVERTISEMENT

ಕೆಂಪುತೋಟದಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಜಾರಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 19:50 IST
Last Updated 11 ಏಪ್ರಿಲ್ 2019, 19:50 IST
ಲಾಲ್‌ಬಾಗ್‌ನಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಆರಂಭಿಸಲಾಗಿದೆ–ಪ್ರಜಾವಾಣಿ ಚಿತ್ರ
ಲಾಲ್‌ಬಾಗ್‌ನಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಆರಂಭಿಸಲಾಗಿದೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ತೋಟಗಾರಿಕೆ ಇಲಾಖೆಯು ಲಾಲ್‌ಬಾಗ್‌ನ ಪಾರ್ಕಿಂಗ್‌ ಸಮಸ್ಯೆಗೆ ಇತಿಶ್ರೀ ಹಾಡಿದೆ.

ಗುರುವಾರ ಲಾಲ್‌ಬಾಗ್‌ನ ಡಬಲ್‌ ರಸ್ತೆ ಕಡೆಯ ಮುಖ್ಯಪ್ರವೇಶ ದ್ವಾರದಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ‌ಪರಿಚಯಿಸಲಾಗಿದೆ. ದ್ವಿಚಕ್ರ ವಾಹನಕ್ಕೆ ₹25 ಶುಲ್ಕ (ಮೂರು ಗಂಟೆಗಳವರೆಗೆ ನಿಲ್ಲಿಸಲು ಅವಕಾಶ) ವಿಧಿಸಲಾಗುತ್ತದೆ. ಬಳಿಕ ಪ್ರತಿ ಗಂಟೆಗೆ ₹5 ಹೆಚ್ಚುವರಿಯಾಗಿ ಪಾವತಿಸಬೇಕು.

ಕಾರಿಗೆ ₹30 (ಮೂರು ಗಂಟೆಗಳವರೆಗೆ ನಿಲ್ಲಿಸಲು ಅವಕಾಶ) ಪಾವತಿಸಬೇಕು. ಬಳಿಕ ಪ್ರತಿ ಗಂಟೆಗೆ ಹೆಚ್ಚುವರಿಯಾಗಿ ₹10 ಪಾವತಿಸಬೇಕು.

ADVERTISEMENT

‘ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯಿಂದಉದ್ಯಾನಕ್ಕೆ ಭೇಟಿ ನೀಡುವವರ ಹಾಗೂ ನಿತ್ಯವಾಹನ ನಿಲುಗಡೆ ಮಾಡುವವರ ಮಾಹಿತಿ ಇಲಾಖೆಗೆ ದೊರೆಯಲಿದೆ. ವಾಣಿಜ್ಯ ಸಂಕೀರ್ಣಗಳಲ್ಲಿರುವಂತೆ ಇಲ್ಲಿಯೂಮಾಹಿತಿ ಗಣಿಕೀಕೃತವಾಗಿರುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಎಂ.ವಿ.ವೆಂಕಟೇಶ್‌ ತಿಳಿಸಿದರು.

‘ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶ ಇದೆ. ಅದಕ್ಕಾಗಿಮೆಟ್ರೊ ಹಾಗೂ ಬಸ್‌ಗಳ ಮೂಲಕ ಉದ್ಯಾನಕ್ಕೆ ಬರುವವರಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಪರಿಚಯಿಸಲು ಯೋಚಿಸುತ್ತಿದ್ದೇವೆ. ಚುನಾವಣೆ ಮುಗಿದ ಬಳಿಕ ಆ ಯೋಜನೆಯನ್ನು ಪರಿಚಯಿಸಲಿದ್ದೇವೆ’ ಎಂದು ಅವರು ತಿಳಿಸಿದರು.

‘ಶಾಲಾ ವಾಹನ ಮತ್ತು ಬೆಳಗಿನ ವಿಹಾರಕ್ಕೆ ಬರುವವರಿಗೆ ಶುಲ್ಕದಿಂದ ವಿನಾಯಿತಿ ಇದೆ. ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೂ ಸ್ಮಾರ್ಟ್‌ ಪಾರ್ಕಿಂಗ್‌ ಸೌಲಭ್ಯಲಭ್ಯವಿರಲಿದೆ. ಇಡೀ ದಿನ ಬೈಕ್‌ ನಿಲ್ಲಿಸಿದರೆ ₹50–₹80 ಹಾಗೂ ಕಾರಿಗೆ ₹80–₹100 ಶುಲ್ಕ ವಿಧಿಸುವ ಕುರಿತು ಚರ್ಚಿಸಲಾಗುತ್ತಿದೆ’ಎಂದು ಲಾಲ್‌ಬಾಗ್‌ನ ಉಪನಿರ್ದೇಶಕ ಎಂ.ಆರ್.ಚಂದ್ರಶೇಖರ ಹೇಳಿದರು.

‘₹ 3 ಕೋಟಿ ವೆಚ್ಚದಲ್ಲಿಬಾಷ್ ಕಂಪನಿಯು ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ. ಅಲ್ಲದೆ ಒಂದು ವರ್ಷದ ನಿರ್ವಹಣೆಗಾಗಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.