ADVERTISEMENT

ಕೆಎಂಎಫ್‌ಗೆ ಭಾರಿ ನಷ್ಟ- ರೇವಣ್ಣ ದೂರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಬೆಂಗಳೂರು: `ಕರ್ನಾಟಕ ಹಾಲು ಮಹಾಮಂಡಲದಲ್ಲಿ (ಕೆಎಂಎಫ್) ಸುಮಾರು 150 ಕೋಟಿ ರೂಪಾಯಿ ಮೊತ್ತದ ಹಾಲಿನ ಪುಡಿ ಹಾಗೂ ಬೆಣ್ಣೆ ದಾಸ್ತಾನು ನಾಲ್ಕು ತಿಂಗಳಿಂದಲೂ ಹಾಗೆಯೇ ಇದ್ದು, ಅದರ ಮಾರಾಟಕ್ಕೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇದರಿಂದಾಗಿ ಒಕ್ಕೂಟಕ್ಕೆ ಭಾರಿ ನಷ್ಟ ಉಂಟಾಗಿದೆ. ಇದರ ಪರಿಣಾಮ ನಾಲ್ಕೈದು ವಾರಗಳಿಂದ ಹಾಲು ಉತ್ಪಾದಕರಿಗೆ ಬಟವಾಡೆ ಕೂಡ ಆಗಿಲ್ಲ~ ಎಂದು ಕೆಎಂಎಫ್ ನಿರ್ದೇಶಕ ಎಚ್.ಡಿ.ರೇವಣ್ಣ ದೂರಿದರು.

`ಜನವರಿಯಿಂದ 3,500ರಿಂದ 4,000 ಟನ್ ಹಾಲಿನ ಪುಡಿ ಹಾಗೂ 3,200 ಟನ್ ಬೆಣ್ಣೆ ದಾಸ್ತಾನು ಮಾಡಲಾಗಿದೆ. ಇದನ್ನು ಮಾರಾಟ ಮಾಡಿಕೊಡುವುದಾಗಿ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಹೇಳಿದ್ದರೂ ಅದಕ್ಕೆ ಕೆಎಂಎಫ್ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಕೆಎಂಎಫ್ 15ರಿಂದ 20 ಕೋಟಿ ರೂಪಾಯಿ ನಷ್ಟ ಅನುಭವಿಸುವ ಸಾಧ್ಯತೆ ಇದೆ~ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

`ಪಶು ಆಹಾರ ಸಲುವಾಗಿ ಮೆಕ್ಕೆಜೋಳ, ಹತ್ತಿ ಬೀಜ ಹಾಗೂ ಅಕ್ಕಿ ತೌಡು ಖರೀದಿಯನ್ನು ಸುಗ್ಗಿ ಕಾಲದಲ್ಲಿ ಮಾಡಿದ್ದರೆ ಮಿತವ್ಯಯ ಸಾಧಿಸಬಹುದಿತ್ತು. ಹಾಗೆ ಮಾಡದೆ ಈಗ ಕಚ್ಚಾ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ  ಖರೀದಿ ಮಾಡಲಾಗುತ್ತಿದೆ. ಇದರಿಂದಲೂ ಕೆಎಂಎಫ್‌ಗೆ 20ರಿಂದ 30 ಕೋಟಿ ರೂಪಾಯಿ ನಷ್ಟವಾಗಲಿದೆ~ ಎಂದು ದೂರಿದರು.

ADVERTISEMENT

ಇದರಿಂದಾಗಿ ಕೆಎಂಎಫ್ ಆಡಳಿತ ಮಂಡಳಿಯ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತಿದೆ. ಸಮಗ್ರ ತನಿಖೆ ನಡೆಸುವ ಅಗತ್ಯ ಇದೆ. ಸಹಕಾರ ಇಲಾಖೆ ಅಧಿಕಾರಿಗಳು ಕೂಡ ಈ ಅಕ್ರಮಗಳಿಗೆ ಕಾರಣರಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ದೆಹಲಿಗೆ ನಿಯೋಗ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ದೆಹಲಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ಯುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ರೇವಣ್ಣ ಟೀಕಿಸಿದರು. ಒಂದು ವೇಳೆ ಸರ್ಕಾರಕ್ಕೆ ನಿಯೋಗ ಒಯ್ಯಲು ಸಾಧ್ಯವಾಗದಿದ್ದರೆ ತಾವೇ ತಮ್ಮ ಪಕ್ಷದ ಎಲ್ಲ ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗಿ ಪ್ರಧಾನಿಯನ್ನು ಭೇಟಿ ಮಾಡಿ ಹೆಚ್ಚಿನ ಹಣ ಬಿಡುಗಡೆಗೆ ಒತ್ತಾಯಿಸುವುದಾಗಿ ತಿಳಿಸಿದರು.

ಧರಣಿ: ಆಲೂಗೆಡ್ಡೆ ಬಿತ್ತನೆ ಬೀಜಕ್ಕೆ ಸಬ್ಸಿಡಿ ಘೋಷಣೆ ಮಾಡದಿದ್ದರೆ ಮುಂದಿನ ವಾರ ಮುಖ್ಯಮಂತ್ರಿ ಮನೆ ಮುಂದೆ ಹಾಸನ ಜಿಲ್ಲೆಯ ಎಲ್ಲ ಶಾಸಕರೂ ಧರಣಿ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.