ಬೆಂಗಳೂರು: `ಮಳೆಯಾದಾಗ ರಾಜ ಕಾಲುವೆಯ ಕೊಳಚೆ ನೀರು ಪ್ರವಾಹದಂತೆ ಅಪಾರ್ಟ್‌ಮೆಂಟ್‌ನಲ್ಲಿ ನುಗ್ಗುತ್ತದೆ. ಇದರಿಂದ, ಬದುಕು ದುಸ್ತರವಾಗಿದೆ. ಆದ್ದರಿಂದ, ರಾಜಕಾಲುವೆಯನ್ನು ಈ ಕೂಡಲೇ ಸ್ವಚ್ಛಗೊಳಿಸಬೇಕು' ಎಂದು ಸಾಯಿ ಗಾರ್ಡನ್ ನಿವಾಸಿಗಳು ಆಗ್ರಹಿಸಿದರು.
`ಪ್ರಜಾವಾಣಿ' ಮತ್ತು `ಡೆಕ್ಕನ್ ಹೆರಾಲ್ಡ್' ಸಂಯೋಗದಲ್ಲಿ ಕಾಡುಗೋಡಿಯ ಚೈತನ್ಯ ಸಮರ್ಪಣ ಕ್ಲಬ್ ಹೌಸ್‌ನಲ್ಲಿ ಶನಿವಾರ ಆಯೋಜಿಸಿದ್ದ `ಓದುಗರ ಸಂಪರ್ಕ' ಕಾರ್ಯಕ್ರಮದಲ್ಲಿ ಬಿಚ್ಚಿಕೊಂಡ ಸಮಸ್ಯೆಗಳಿವು.
ಅಪಾರ್ಟ್‌ಮೆಂಟ್ ನಿವಾಸಿಗಳ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರವನ್ನು ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿತ್ತು.
`ಕೆಲವು ವರ್ಷಗಳ ಹಿಂದೆ ಮಳೆಗಾಲದಲ್ಲಿ ನೀರು ಹೆಚ್ಚಾಗಿ ರಾಜ ಕಾಲುವೆಯು ತುಂಬಿ ಎಲ್ಲ ಕೊಳಚೆ ನೀರು ಪ್ರವಾಹದಂತೆ ಉಕ್ಕಿ ಸಾಯಿ ಗಾರ್ಡನ್ಸ್ ಅಪಾರ್ಟ್‌ಮೆಂಟ್‌ನೊಳಗೆ ನುಗ್ಗಿತ್ತು. ಅಲ್ಲಿ ಜೀವನ ಮಾಡುವುದೇ ಕಷ್ಟವಾಗಿದೆ' ಎಂದು ಅಪಾರ್ಟ್‌ಮೆಂಟ್ ನಿವಾಸಿ ಮಧುಸೂದನ ಅವರು ತಮ್ಮ ಅಳಲು ತೋಡಿಕೊಂಡರು.
`ರಾಜಕಾಲುವೆಯಲ್ಲಿ ಹುಲ್ಲು, ಗಿಡ, ಬಳ್ಳಿಗಳು ಬೆಳೆದು ನೀರು ಸರಾಗವಾಗಿ ಹರಿಯಲು ತಡೆಯೊಡ್ಡಿವೆ. ಅಲ್ಲದೇ, ಬೇರೆಯವರು ತಂದು ಹಾಕುವ ತ್ಯಾಜ್ಯ ಇನ್ನೊಂದು ರೀತಿಯ ಸಮಸ್ಯೆಯಾಗಿದೆ. ಆದ್ದರಿಂದ, ರಾಜಕಾಲುವೆಯಲ್ಲಿ ಬೆಳೆದಿರುವ ಕಸವನ್ನು ತೆಗೆದು ಸ್ವಚ್ಛಗೊಳಿಸಬೇಕು.
ಬರುತ್ತಿರುವ ಮಳೆಗಾಲದಲ್ಲಿ ಹಿಂದೆ ಆದ ಅನಾಹುತವನ್ನು ತಪ್ಪಿಸಬೇಕು' ಎಂಬುದು ಅವರ ಆಗ್ರಹಬಿಬಿಎಂಪಿ ಜಂಟಿ ಆಯುಕ್ತ ಕೆ.ಎನ್. ದೇವರಾಜ್ ಉತ್ತರಿಸಿ, `ಬಿಬಿಎಂಪಿ ಅಧೀನದಲ್ಲಿ ಇಲ್ಲಿನ ಎಲ್ಲ ಅಪಾರ್ಟ್‌ಮೆಂಟ್‌ಗಳೂ ಬರುವುದಿಲ್ಲ. ಆದರೆ, ಕೆಲವು ಅಪಾರ್ಟ್‌ಮೆಂಟ್‌ಗಳು ಮಾತ್ರ ಬರುತ್ತವೆ. ಇರುವ ಸಮಸ್ಯೆ ಎಲ್ಲವನ್ನೂ ಬರೆದು ಕೊಡಿ, ಪರಿಶೀಲಿಸುತ್ತೇವೆ. ರಾಜಕಾಲುವೆಯ ಸರ್ವೇ ಮಾಡಲಾಗಿದೆ. ಈ ವರ್ಷದ ಕ್ರಿಯಾಯೋಜನೆಯಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುವುದು' ಎಂದು ಭರವಸೆ ನೀಡಿದರು.
`ಆಸ್ತಿ ತೆರಿಗೆಯನ್ನು ಪಾವತಿಸುವುದೇ ಸಮಸ್ಯೆಯಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದರೆ, ಸೀಗೆಹಳ್ಳಿ ಪಂಚಾಯಿತಿ ತಮ್ಮ ಅಧಿಕಾರದಲ್ಲಿ ಬರುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ, ನಾವು ಆಸ್ತಿ ತೆರಿಗೆಯನ್ನು ಎಲ್ಲಿ ಪಾವತಿಸಬೇಕು' ಎಂದು ಅಕ್ಷಯ ಅಪಾರ್ಟ್‌ಮೆಂಟ್‌ನ ನಿವಾಸಿ ಜಯದೇವ ಪ್ರಶ್ನಿಸಿದರು.
`ಖಾತೆ ಮಾಡಿಸಿಕೊಳ್ಳುವ ಬಗ್ಗೆ ಅನೇಕ ಗೊಂದಲಗಳಿವೆ. ಖಾತೆ ಮಾಡಿಕೊಳ್ಳಲು ಅಲೆದಲೆದು ಸಾಕಾಗಿದೆ. ಖಾತೆ ಕೇಳಲು ಹೋದರೆ ನಮ್ಮ ಹತ್ತಿರ ಲಂಚ ಕೇಳುತ್ತಾರೆ' ಎಂದು ಅವರು ದೂರಿದರು.
ಇದಕ್ಕೆ ದೇವರಾಜ್ ಉತ್ತರಿಸಿ, `ವಾಸ ಪ್ರಮಾಣ ಪತ್ರವನ್ನು ತೆಗೆದುಕೊಂಡು ಬಿಬಿಎಂಪಿ ಕಚೇರಿಗೆ ಬಂದರೆ, ಅಧಿಕಾರಿಗಳಿಗೆ ಹೇಳಿ, ನಿಮ್ಮ ಖಾತೆ ಮಾಡಿಕೊಡಲಾಗುವುದು' ಎಂದರು.
`ಇಲ್ಲಿನ ಎಲ್ಲ ಅಪಾರ್ಟ್‌ಮೆಂಟ್‌ಗಳಿಗೂ ಕಾವೇರಿ ನೀರನ್ನು ಒದಗಿಸಬೇಕು ಎಂದು ಒತ್ತಾಯಿಸಿದ ಅಲ್ಲಿನ ನಿವಾಸಿಗಳು ನೀರಿಗಾಗಿ ಸಾವಿರಾರು ರೂಪಾಯಿ ವೆಚ್ಚವಾಗುತ್ತಿದೆ. ಆದ್ದರಿಂದ ನಮಗೂ ಕಾವೇರಿ ನೀರನ್ನು ಒದಗಿಸಬೇಕು' ಎಂದು ಆಗ್ರಹಿಸಿದರು.
`ಇಲ್ಲಿ ಸರಿಯಾದ ಬಸ್ ನಿಲ್ದಾಣವಿಲ್ಲ. ಬಸ್ ನಿಲ್ದಾಣದಲ್ಲಿ ಬಸ್‌ಗಳು ನಿಲ್ಲುವುದೇ ಇಲ್ಲ. ಮುಂದೆ ದೂರದಲ್ಲಿ ನಿಲ್ಲುತ್ತವೆ. ಅಲ್ಲದೇ, ಮರಳು ಲಾರಿಗಳಿಂದ ಇಲ್ಲಿ ಸಾರಿಗೆ ದಟ್ಟಣೆಯು ಉಂಟಾಗುತ್ತಿದೆ. ಕತಮನಲ್ಲೂರು ಗೇಟ್‌ನಿಂದ ಭಾರಿ ಪ್ರಮಾಣದಲ್ಲಿ ಸಾರಿಗೆ ದಟ್ಟಣೆ ಉಂಟಾಗುತ್ತದೆ. ಇದಕ್ಕೆ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದರು.
ಬೀದಿ ದೀಪ: `ಪಾದಚಾರಿಗಳಿಗೆ ಸೂಕ್ತ ಪಾದಚಾರಿ ಮಾರ್ಗಗಳಿಲ್ಲ. ಮುಖ್ಯ ರಸ್ತೆಯಲ್ಲಿ ಮೂರು ಬಾರ್‌ಗಳಿವೆ. ಜನರು ಕುಡಿದು ಎಲ್ಲೆಂದರಲ್ಲಿ ರಸ್ತೆಯನ್ನು ದಾಟುತ್ತಾರೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು' ಎಂದು ನಿವಾಸಿ ರಾಜಶೇಖರ್ ಸಮಸ್ಯೆ ಹೇಳಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.