ADVERTISEMENT

ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2010, 10:40 IST
Last Updated 29 ಡಿಸೆಂಬರ್ 2010, 10:40 IST
ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಗೆ ಸಲಹೆ
ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಗೆ ಸಲಹೆ   

ಬೆಂಗಳೂರು: ‘ಹೆಸರಘಟ್ಟ ಬಳಿ ಇರುವ 250 ಎಕರೆ ಭೂಮಿಯನ್ನು ಚಿತ್ರನಗರಿ ನಿರ್ಮಾಣಕ್ಕೆ ನೀಡಿದರೆ ಕನ್ನಡ ಚಿತ್ರೋದ್ಯಮದ ವ್ಯಾಪ್ತಿ ವಿಸ್ತರಿಸಲಿದೆ’ ಎಂದು ವಿಧಾನಪರಿಷತ್ತಿನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.

ನಾಗೇಶ್ ಗೌಡ ಫೌಂಡೇಶನ್ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ಸಿನಿಮಾ ಗೀತರಚನೆಕಾರ ಗೀತಪ್ರಿಯ ಅವರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.‘ಅನೇಕ ಉದ್ಯಮಗಳಂತೆ ಸಿನಿಮಾ ಕೂಡ ಕುಂಟುತ್ತಿದ್ದು ಇದನ್ನು ತಪ್ಪಿಸಲು ಅಗತ್ಯ ಕ್ರಮಕೈಗೊಳ್ಳಬೇಕಿದೆ. ಸರ್ಕಾರವೇ ಸಂಪೂರ್ಣವಾಗಿ ಚಿತ್ರನಗರಿ ನಿರ್ಮಿಸಲು ಸಾಧ್ಯವಾಗದಿದ್ದಲ್ಲಿ ಖಾಸಗಿ ಸಹಭಾಗಿತ್ವದೊಡನೆ ಚಿತ್ರನಗರಿ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.

‘ಗೀತಪ್ರಿಯ ಅವರು ಸಿನಿಮಾ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅವರ ಗೀತೆಗಳು ಯುವಜನರಿಗೆ ಮಾದರಿಯಾಗಿವೆ’ ಎಂದು ಅವರು ಹೇಳಿದರು. ಚಿತ್ರಗೀತೆ ರಚನೆಕಾರ ಗೀತಪ್ರಿಯ ಮಾತನಾಡಿ ‘ನಟರ ಸಹಕಾರವಿಲ್ಲದೇ ನಿರ್ದೇಶಕನ ಪಾತ್ರ ಏನೇನೂ ಇರುವುದಿಲ್ಲ. ಅನೇಕ ನಟರ ಸಹಕಾರದಿಂದಾಗಿ ನನ್ನ ನಿರ್ದೇಶನದ ಚಿತ್ರಗಳು ಯಶಸ್ವಿಯಾದವು’ ಎಂದರು.

ನಿರ್ಮಾಪಕ ನಾಗೇಶ್‌ಗೌಡ ಮಾತನಾಡಿ ‘ಕನ್ನಡದಲ್ಲಿ ಮಕ್ಕಳ ಚಿತ್ರ ನಿರ್ಮಾಣ ಹೆಚ್ಚಾಗಿ ನಡೆಯಬೇಕಿದೆ. ನಿರ್ಮಾಣವಾದ ಮಕ್ಕಳ ಚಿತ್ರಗಳಿಗೆ ಪ್ರೋತ್ಸಾಹ ಕೂಡ ಅಷ್ಟೇ ಅಗತ್ಯವಾಗಿದೆ’ ಎಂದು ಹೇಳಿದರು.

ನಟ ಶಿವರಾಂ, ನಟಿ ಜಯಂತಿ,  ಸಾಃಇತಿ ದೊಡ್ಡರಂಗೇಗೌಡ, ಚಲನಚಿತ್ರೋದ್ಯಮದ ಗಣ್ಯರಾದ ಎಸ್.ಎ.ಚಿನ್ನೇಗೌಡ, ಸುರೇಶ್ ಗೌಡ, ನಂಜುಂಡೇಗೌಡ, ಆರ್.ರತನ್ ಸಿಂಗ್, ಜಯಂತಿ,ಬಿ.ಎಚ್.ಅನಿಲ್ ಕುಮಾರ್, ವಿಜಯ ಕುಮಾರ್, ಕೆ.ವಿ.ಪ್ರಭುದೇವ್ ಉಪಸ್ಥಿತರಿದ್ದರು. ನಂತರ ಮೆಲೋಡಿ ಬಾಯ್ಸಿ ವಾದ್ಯ ವೃಂದದಿಂದ ಗಾಯನ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT