ADVERTISEMENT

ಖುದ್ದು ಹಾಜರಿಗೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 20:18 IST
Last Updated 13 ನವೆಂಬರ್ 2017, 20:18 IST

ಬೆಂಗಳೂರು: ‘ವಿಕ್ಟೋರಿಯಾ ಆಸ್ಪತ್ರೆ ಆವರಣದ ಸರ್ಕಾರಿ ದಂತ ಆರೋಗ್ಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಖಾಲಿಯಿರುವ ವಿವಿಧ ವೈದ್ಯಾಧಿಕಾರಿ ಹಾಗೂ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆಯೇ ಹೇಗೆ ಎಂಬುದರ ಬಗ್ಗೆ ವಿವರ ಒದಗಿಸಿ’ ಎಂದು ಸಿಬ್ಬಂದಿ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಇದೇ 20ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾಯಮೂರ್ತಿ ಆರ್‌.ಎಸ್.ಚೌಹಾಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಆದೇಶಿಸಿದೆ.

‘ಕಾಲೇಜಿನಲ್ಲಿರುವ ಆರ್ಥೋಡಾಂಟಿಕ್ಸ್ ವಿಭಾಗದ ಉಪನ್ಯಾಸಕರ ಹುದ್ದೆಗೆ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲು ನೀಡಬೇಕು ಮತ್ತು ನನ್ನನ್ನು ದಂತ ಆರೋಗ್ಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ದಂತ ಅಧಿಕಾರಿಯಾಗಿ ನೇಮಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಡಾ.ಎಸ್.ಜೆ.ರಾಜಲಕ್ಷ್ಮೀ ಸಲ್ಲಿಸಿರುವ ಅರ್ಜಿ ಇದಾಗಿದೆ.

ADVERTISEMENT

ನ್ಯಾಯಾಂಗ ನಿಂದನೆ ಎಚ್ಚರಿಕೆ: ಪ್ರಕರಣದಲ್ಲಿ ಡಾ.ರಾಜಲಕ್ಷ್ಮೀ ಪರ ಅವರ ತಾಯಿ ಡಾ.ಶೋಭಾ ಅವರೇ ಖುದ್ದ ವಾದ ಮಂಡಿಸುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿ ಸಲ್ಲಿಸಿದ ಮೆಮೊ ಬಗ್ಗೆ ನ್ಯಾಯಪೀಠ ವಿಚಾರಣೆ ನಡೆಸುತ್ತಿರುವಾಗ ಶೋಭಾ ಏಕಾಏಕಿ ಏರುದನಿಯಲ್ಲಿ ಅತೃಪ್ತಿ ಹೊರ ಹಾಕಿದರು. ‘ನಿಮ್ಮ (ಚೌಹಾಣ್‌) ವಿರುದ್ಧ ಹಂಗಾಮಿ ಮುಖ್ಯ ನ್ಯಾಯಮೂರ್ತಿಗೆ ದೂರು ಸಲ್ಲಿಸುತ್ತೇನೆ’ ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ‘ಇದು ಅಶಿಸ್ತಿನ ವರ್ತನೆ. ಪುನರಾವರ್ತನೆ ಆದರೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಗುವುದು’ ಎಂದು ಎಚ್ಚರಿಸಿದರು.

‘ನಿಮಗೆ ವಕೀಲರ ಸಹಾಯ ಬೇಕಾದರೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಕೇಳಿಕೊಳ್ಳಿ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.